ಮಂಗಳವಾರ, ನವೆಂಬರ್ 1, 2011

ಶ್ರೀ ರಂಗ ಪಟ್ಟಣದಲ್ಲಿ ಶ್ರೀಗಂಧದ ಶೇಖರಣೆಗೆ ಒಂದು ದಾಸ್ತಾನು ಕೋಠಿ ಇತ್ತು!!! ಅದೇ ಸ್ವಾಮೀ ಸಂದಿಲ್ ಕೋಟಿ!!!!!


ಗತ ಕಾಲದ  ವೈಭವ ಕಳೆದುಕೊಂಡ  ಶ್ರೀ ಗಂಧ ದಾಸ್ತಾನು ಕೋಠಿ

ಬಹಳ ದಿನಗಳ ನಂತರ ಮತ್ತೆ ನನ್ನನ್ನು  ಇಲ್ಲಿಗೆ ಕರೆತಂದ  ವಿಚಾರ ಇದು  . ಹಿಂದಿನ ಸಂಚಿಕೆಯಲ್ಲಿ ನಿಮಗೆ ಗಂಗಾಧರೇಶ್ವರ ಸ್ವಾಮೀ ದೇವಾಲಯ ಪರಿಚಯ ಮಾಡಿಕೊಟ್ಟಿದ್ದೆ.   ಅದಕ್ಕೆ ಸನಿಹದಲ್ಲೇ  ಕಂಡುಬರುವುದು ಈ ಸ್ಮಾರಕ . ಹೈದರ್ ಅಲಿ  ಹಾಗು ಟಿಪ್ಪೂ ಸುಲ್ತಾನನ ಕಾಲದ್ದೆಂದು ಹೇಳಲಾಗುವ ಈ ಸ್ಮಾರಕ  ಶ್ರೀ ರಂಗ ಪಟ್ಟಣದ ಪ್ರಮುಖ ಆರ್ಥಿಕ ವಹಿವಾಟಿನ ಕೇಂದ್ರವಾಗಿತ್ತು.  ಹೌದು ಹಿಂದೆ ಆಳ್ವಿಕೆ ನಡೆಸಿದ್ದ ಬಹುಷಃ ಎಲ್ಲಾ  ರಾಜ್ಯಗಳ ರಾಜರು ತಮ್ಮ ರಾಜ್ಯದ ಆರ್ಥಿಕ ಮಟ್ಟ ಹೆಚ್ಚಿಸಲು  ಅಮೂಲ್ಯವಾದ ಉತ್ಪನ್ನಗಳ ರಫ್ತು ಮಾಡಿ ತಮ್ಮ ಖಜಾನೆ ತುಂಬಿಸಿ ಕೊಳ್ಳುತ್ತಿದ್ದರು . ಅಂತಹ ಒಂದು ಪ್ರಮುಖ ದಾಸ್ತಾನು ಮಳಿಗೆ ಇದು . ದಕ್ಷಿಣ ಕರ್ನಾಟಕ ಪ್ರಾಂತ ಶ್ರೀ ಗಂಧದ  ಮರಗಳಿಗೆ ಹೆಸರುವಾಸಿ. ಈ ಮರಗಳ ಉತ್ಪನ್ನ ಮಾರಾಟ ಮಾಡಿ ಅಂದು ಅತೀ ಹೆಚ್ಚು ಲಾಭ ಮಾಡಿಕೊಂಡವರು ಹೈದರ್ ಹಾಗು ಟಿಪ್ಪೂ ಸುಲ್ತಾನ್.  ಅಂದಿನ ಕಾಲದಲ್ಲಿ ಶ್ರೀಗಂಧ ಮರದ ಮಾರಾಟ ಅತೀ ಲಾಭ ಕೊಡುವ ಆರ್ಥಿಕ  ವಹಿವಾಟು ಆಗಿತ್ತೆಂದು     ತೋರುತ್ತದೆ.ಇಂತಹ ಅಮೂಲ್ಯ ಶ್ರೀ ಗಂಧದ ಮರಗಳನ್ನು ,ಹಾಗು ಉತ್ಪನ್ನಗಳನ್ನು ಸಂರಕ್ಷಿಸಲು  ಹಾಗು ವಹಿವಾಟು ನಡೆಸಲು ಇದ್ದ ಕೇಂದ್ರವೇ ಈ  "ಸೆಂದಿಲ್ ಕೋಠಿ "
ಅಂದಿನ ವೈಭವದ ಸಂದಲ್  ಕೋಟಿ[ ಚಿತ್ರ ಕೃಪೆ ಅಂತರ್ಜಾಲ]

  ಅಂದು ಈ ಕೋಠಿಯ ವೈಭವ ತೋರುವ ಅಪರೂಪದ ಹಳೆಯ ಚಿತ್ರ  ಇಲ್ಲಿದೆ ನೋಡಿ  ಅದರ ರಕ್ಷಣೆಗೆ ನಿಂತ ಸಿಬ್ಬಂಧಿಗಳನ್ನೂ ನೀವು ಚಿತ್ರದಲ್ಲಿ ಕಾಣಬಹುದು. ಈ ಚಿತ್ರ ಸುಮಾರು ಒಂದು ನೂರ ಇಪ್ಪತ್ತು ವರ್ಷಗಳ ಹಿಂದೆ ತೆಗೆಯಲಾಗಿದ್ದು  ಇತಿಹಾಸದ ವೈಭವದ ದಿನಗಳನ್ನು ಜ್ಞಾಪಿಸುತ್ತದೆ. ಸ್ವಲ್ಪ ಗಮನಿಸಿ  ಕೋಠಿಯ  ಪ್ರವೇಶ ದ್ವಾರದಲ್ಲಿ  ಶ್ರೀ ಗಂಧದ ಮರದ ತುಂಡುಗಳಿಂದ ಕಲಾತ್ಮಕವಾಗಿ  ಸಿಂಗರಿಸಿರುವುದನ್ನು ನಾವು ಕಾಣಬಹುದು .ಇಷ್ಟೆಲ್ಲಾ ಮೆರೆದಾಡಿದ  ಈ ಭವ್ಯ ಪ್ರದೇಶದಲ್ಲಿ  ಮೈಸೂರಿನ ಅಂತಿಮ ಯುದ್ದದ ನಂತರ ಇದರ ವಹಿವಾಟು ಸ್ಥಗಿತಗೊಂಡು ಆನಂತರದ ದಿನಗಳಲ್ಲಿ  ಸ್ವಲ್ಪ ಕಾಲ ಪುರಸಭೆ ಕಚೇರಿಯಾಗಿ  ನಂತರ ಈಗ "ಕುಸ್ತಿ"  ಅಖಾಡವಾಗಿ  ನಿಂತಿದೆ.
ಹಾಲಿ ಕುಸ್ತಿ ಅಖಾಡ ಹೀಗಿದೆ 
ಇತಿಹಾಸದ ಅಣಕ ವೆಂದರೆ  ಇದೆ ಅಲ್ಲವೇ?? ಗತಕಾಲದ ನೆನಪಿನಲ್ಲಿ  ಇಲ್ಲಿಂದ ವಿದೇಶಗಳಿಗೆ  ಕನ್ನಡ ಸೀಮೆಯ ಶ್ರೀ ಗಂಧ ರಫ್ತಾಯಿತೆ  ಎಂಬ ಪ್ರಶ್ನೆಗೆ  ಹಾಲಿ ಉತ್ತರವಿಲ್ಲ. ಹಾಗು ಈ ಸ್ಮಾರಕ  ಹೇಗಿತ್ತು ಎಂಬ ಕಲ್ಪನೆ ಇಂದಿನ ಪೀಳಿಗೆಗೆ ಸಿಗುತ್ತಿಲ್ಲ. ಇತಿಹಾಸ ಕೆಣಕಿದರೂ ಹಲವಾರು ಸ್ಮಾರಖಗಳ  ಬಗ್ಗೆ ಮಾಹಿತಿ ಸಿಗುವುದು ಕಷ್ಟವಾಗಿದೆ .ಯಾಕೆಂದ್ರೆ ನಿಜವಾದ ಮಾಹಿತಿ ಕಾಲಗರ್ಭದ ಒಳಗೆ  ಸಿಗಲಾರದಷ್ಟು  ಆಳಕ್ಕೆ ಸೇರಿಬಿಟ್ಟಿದೆ. ಈ ಸ್ಮಾರಕ   ಬಗ್ಗೆ ನನ್ನ ಬಳಿ ಇರುವುದು ಇಷ್ಟೇ ಮುಂದಿನ ಸಾರಿ ಮತ್ತೊಂದು ಸ್ಮಾರಕ  ಪರಿಚಯ ಮಾಡಿ ಕೊಳ್ಳೋಣ. ಅಲ್ಲಿಯವರೆಗೆ  ಶುಭ ಸಮಯ.[

4 ಕಾಮೆಂಟ್‌ಗಳು:

Badarinath Palavalli ಹೇಳಿದರು...

ಇಂತಹ ಒಂದು ಬ್ಲಾಗು ಕೋಟಿ ಉತ್ಕಲನಗಳ ಕೋಶ!

ಲೇಖನ ಮತ್ತು ನೀವು ಜೊತೆ ಮಾಡಿರುವ ನೀವೆ ತೆಗೆದ ಚಿತ್ರಗಳೂ ಪ್ರಶಂಸನೀಯ.

ಮೊದಲಿಗೆ ಅಷ್ಟು ಹಳೆಯ ಫೋಟೋ ಹುಡುಕಿ ತೆಗೆದ ನಿಮಗೆ ಗೌರವ ಸಲ್ಲಬೇಕು. ಸದರಿ ಚಿತ್ರವು:

1. ಅಂದಿನ ಪ್ರಿಂಟಿನ ಕ್ವಾಲಿಟಿ ತೋರಿಸುತ್ತದೆ. ಸ್ಪಷ್ಟತೆ, ಆಳ, ಸಾಂಧ್ರತೆ ಮತ್ತು ಇಷ್ಟು ದೀರ್ಘ ಕಾಲವಾದರೂ ಮಾಸದ ಅದರ ತಾಳಿಕೆ. ನಮ್ಮನು ಬೆರಗುಗೊಳಿಸುತ್ತದೆ.

2. ಅಂದಿನ ಜನರ ವಸ್ತ್ರ ವಿನ್ಯಾಸ ದಾಖಲಿಸುತ್ತದೆ.

ಐತಿಹ್ಯ ಪೂರ್ಣವಾದ ನಗರವೊಂದು ಕಾಲಾಂತರದಲ್ಲಿ ಕಳೆದೇ ಹೋಗುವ ಸಾಲಿಗೆ, ಶ್ರೀರಂಗ ಪಟ್ಟಣ ಜೀವಂತ ಉದಾಹರಣೆ.

ಟಿಪ್ಪು ಹಾಗೂ ಹೈದರಲಿ ನಾಡಿನ ಸಂಪತ್ತನ್ನು ಲೂಟಿ ಹೊಡೆದದ್ದಕ್ಕೆ ಈ ವಹವಾಟು ಕೇಂದ್ರ ಸಾಂಕೇತಿಕ.

ಸ್ಮಾರಕಗಳು ಜನರ ಮನಸ್ಸಲ್ಲಿ ಸಂರಕ್ಷಿತ ತಾಣಗಳಾಗಬೇಕು ಎಂದರಿವಾಗುವ ತನಕ, ಸರ್ಕಾರಗಳಿಗೂ ಭರ್ತಿ ನಿದ್ರೆ.

ಜಲನಯನ ಹೇಳಿದರು...

ಬಾಲು ಚಿತ್ರ-ಕಥೆಗೆ ಬಾಲುವೇ ಸಾಟಿ... ಬಹಳ ಶಾಂತ ಮತ್ತು ಸ್ಫೋಟಕ ಕಲಾಪ್ರತಿಭೆಯ ಆಪ್ಯಾಯ ವ್ಯಕ್ತಿತ್ವದ ಬಾಲುವಿನಿಂದ ಇಂತಹ ಲೇಖನಗಳು ಹಲವು... ಇತಿಹಾಸ, ಚಿತ್ರ ಮತ್ತು ಮಾಹಿತಿ ಮೂರರ ಅಪೂರ್ವ ಸಂಗಮ.

ಅಂದಹಾಗೆ ಬಾಲು - ಕೋಠಿ ಗೂ ಕೋಟಿಗೂ ವ್ಯತ್ಯಾಸವಿದೆ. ಕೋಠಿ-ಕೊಠ್ಠಿ - ಒಂದು ಕೋಣೆ -ವಿಶೇಷತಃ ಸಂಗ್ರಹ ಅಥವಾ ಉಗ್ರಾಣದ ತರಹದ್ದು. ನಮ್ಮ ದಕ್ಕನಿ ಉರ್ದು ಭಾಷೆಯಲ್ಲಿ ಇದನ್ನು ಅಡುಗೆ ಕೋಣೆಗೂ ಉಪಯೋಗಿಸುತ್ತಾರೆ.

ಮನಸು ಹೇಳಿದರು...

ನಿಮಗೆ ನೀವೇ ಸಾಟಿ... ಎಷ್ಟೋ ವಿಷಯಗಳು ಗೊತ್ತೇ ಇರುವುದಿಲ್ಲ ಅಂತಹ ವಿಚಾರಗಳನ್ನು ಹುಡುಕಿ ನಮಗೆ ತಿಳಿಸುತ್ತಲೇ ಬಂದಿದ್ದೀರಿ ಧನ್ಯವಾದಗಳು ಸರ್

Manjunatha Kollegala ಹೇಳಿದರು...

ಒಳ್ಳೆಯ ಮಾಹಿತಿ, ಬೆಲೆಯುಳ್ಳ ಚಿತ್ರಗಳು. ಇಂಥ ಸ್ಥಳಗಳಲ್ಲಿ ತಿಳಿದವರಿಂದ ಕತೆ ಕೇಳುತ್ತಾ ಸುತ್ತಾಡುವುದು ನನ್ನ ಆಸೆ. ಎಂದಾದರು ಕೈಗೂಡುವುದೋ ನೋಡೋಣ.