ಭಾನುವಾರ, ಜುಲೈ 8, 2012

ಮೂಡಲ ದಿಕ್ಕಿನಿಂದ ಬಡಗಲ ದಿಕ್ಕಿಗೆ ತಿರುಗಿದ ಹನುಮಂತ, ಸನಿಹದಲ್ಲೇ ಇದ್ದಾನೆ ಜ್ಯೋತಿರ್ ಮಹೇಶ್ವರ !!!!!


ಮೂಡಲ ಬಾಗಿಲ ಆಂಜನೇಯ ಸ್ವಾಮೀ ದೇವಾಲಯ.

ಇತಿಹಾಸವೇ ಹಾಗೆ ವಿಚಿತ್ರ ತಿರುವಿನ ಘಟನೆಗಳ ಸರಮಾಲೆ, ಅಲ್ಲಿ ನಮ್ಮ ತರ್ಕ ,ಕುತರ್ಕ, ಇವುಗಳಿಗೆ ಅವಕಾಶವಿಲ್ಲ.ನಾವಿಂದು ಸ್ವಾತಂತ್ರ್ಯದ ಸಮಾಜದಲ್ಲಿ ಅಂದು ಹಾಗಿರಬೇಕಿತ್ತು, ಹೀಗಿರಬೇಕಿತ್ತು ಎಂದು ಏನೇ ಪ್ರಲಾಪಿಸಿದರೂ ಆಗಿಹೋಗಿರುವ ಐತಿಹಾಸಿಕ ಘಟನೆಗಳನ್ನು ಬದಲಾಯಿಸಲು ಸಾಧ್ಯವಿಲ್ಲಾ.ಇತಿಹಾಸವನ್ನು ಅರ್ಥ ಮಾಡಿಕೊಳ್ಳ ಬೇಕಾದರೆ ನಾವು ಅಂದಿನವರಾಗಿ ಇದ್ದು ಅರ್ಥ ಮಾಡಿಕೊಳ್ಳ ಬೇಕು , ಆದರೆ ನಾವು ನಮ್ಮ ಮೂಗಿನ ನೇರಕ್ಕೆ ಅದನ್ನು ವಿಶ್ಲೇಷಣೆ ಮಾಡಿ ಇತಿಹಾಸವನ್ನು ಗೊಂದಲದ ಗೂಡಾಗಿಸಿ ಘಟನೆಗಳನ್ನು ಮರೆ ಮಾಚುತ್ತಿದ್ದೇವೆ.ಬನ್ನಿ ಈ ಸಂಚಿಕೆಯಲ್ಲಿ ನಿಮಗೆ ಎರಡು ಹಳೆ ದೇವಾಲಯಗಳನ್ನು ಪರಿಚಯ ಮಾಡಿಕೊಡುತ್ತೇನೆ.
ಮೂಡಲದಿಂದ ಬದಗಳಿಗೆ ತಿರುಗಿದ ಹನುಮ

ಜುಮ್ಮಾ ಮಸೀದಿ ಹತ್ತಿರದಲ್ಲಿ ಹಾದು ಹೋಗುವ ಪೇಟೆ ಬೀದಿಯಲ್ಲಿ ಊರಕದೆಗೆ ತೆರಳುವಾಗ ನಿಮಗೆ  ಬೀದಿಯ ಎಡ ಭಾಗಕ್ಕೆ ಮೂಡಲ ಬಾಗಿಲ ಆಂಜನೇಯ ದೇಗುಲ ಸಿಗುತ್ತದೆ. ಈ ದೇವಾಲಯವು ಮೊದಲು ಶ್ರೀ ರಂಗಪಟ್ಟಣ  ಕೋಟೆಯ  ಪೂರ್ವದ ಬಾಗಿಲಿಗೆ ಅಭಿಮುಖವಾಗಿ  ಇತ್ತೆಂದೂ ನಂತರ ಇದನ್ನು ಸ್ಥಳಾಂತರಿಸಿ ಇಲ್ಲಿ ಉತ್ತರಾಭಿಮುಖವಾಗಿ  ಪ್ರತಿಷ್ಟಾಪಿಸಲಾಯಿತೆಂದು ಹೇಳುತ್ತಾರೆ.ಹಲವು ಕಾರಣಗಳಿಂದ ಮಹಾ ಬಲವಂತ ನಾದ ಹನುಮನು  ಇಲ್ಲಿ ಮೂಡಲ ದಿಕ್ಕಿಗೆ   ಬದಲು ಬಡಗಲ ದಿಕ್ಕಿಗೆ  ಮುಖ ಮಾಡಿ ಇತಿಹಾಸವನ್ನು ಮೆಲುಕು ಹಾಕುತ್ತಾ ನಿಂತಿದ್ದಾನೆ , ಇಲ್ಲಿ ತನ್ನ ಸೌಹಾರ್ಧತೆಯನ್ನು ಮೆರೆದಿದ್ದಾನೆ.ದೇವಾಲಯದ ಒಳಗೆ ಸುಂದರ  ಹನುಮ ಮೂರ್ತಿ ಇದ್ದು ಪ್ರವಾಸಿಗಳು ಇದನ್ನು ದರ್ಶನ ಮಾಡಲು ಉತ್ತಮವಾಗಿದೆ.