ಗುರುವಾರ, ಡಿಸೆಂಬರ್ 1, 2011

ಕಾಣದಂತೆ ಹಲವು ದಶಕಗಳು ಮರೆಯಾಗಿದ್ದ ಈ ಸೆರೆಮನೆಯನ್ನು ಇಂಜಿನಿಯರ್ ಒಬ್ಬ ಕಂಡುಹಿಡಿದು ಪರಿಚಯಿಸಿದರು.!!


ಹೌದು ಐತಿಹಾಸಿಕವಾಗಿ  ಮೆರೆದಾಡಿದ್ದ ಈ ಸೆರೆಮನೆ 1859 ರವರೆಗೂ ಅಜ್ಞಾತವಾಗಿ ಉಳಿದಿತ್ತು.ಆದರೆ  ಥಾಮಸ್ ಇನ್ಮಾನ್ ಎಂಬ  ಆಂಗ್ಲ  "ಎಗ್ಸಿಕುಟಿವ್ ಇಂಜಿನೀರ್ " ಈ ಸೆರೆಮನೆಯನ್ನು 1859  ರಲ್ಲಿ ಇದನ್ನು  ಪತ್ತೆ ಹಚ್ಚಿ ಗುರುತು ಹಿಡಿದ ಕಾರಣ ಅವರ  ಹೆಸರಿನ ಒಂದು ಕಮಾನು ನಿರ್ಮಿಸಿ ಈ ಸೆರೆಮನೆಗೆ "ಇನ್ಮಾನ್ ಡನ್ಜನ್ " ಎಂದು ಕರೆಯಲಾಗಿದೆ.ಬನ್ನಿ ಈ ಡನ್ಜನ್  ಹತ್ತಿರ ತೆರಳೋಣ.

ಗುರುವಾರ, ನವೆಂಬರ್ 17, 2011

ಟಿಪ್ಪು ಮಡಿದದ್ದು ಎಲ್ಲಿ ??? ದೇಹಸಿಕ್ಕಿದ್ದು ಎಲ್ಲಿ ??? ಈ ಎರಡು ಸ್ಮಾರಕಗಳ ಗತ ಇತಿಹಾಸದಲ್ಲಿ !!!





ಕಳೆದ ಹಲವಾರು ಸಂಚಿಕೆಗಳಿಂದ ನೀವು ಶ್ರೀರಂಗಪಟ್ಟಣದ ಹಲವಾರು ಸ್ಮಾರಕಗಳ ಪರಿಚಯ ಮಾಡಿಕೊಂಡಿದ್ದೀರಿ , ಬನ್ನಿ ಈ ಸಂಚಿಕೆಯಲ್ಲಿ ಎರಡು ಶತಮಾನಗಳ ಹಿಂದಿನ ಘಟನೆಯ ಎರಡು ಪ್ರಮುಖ ಸ್ಮಾರಕಗಳ ಪರಿಚಯ ಮಾಡಿಕೊಳ್ಳೋಣ . ಶ್ರೀ ಗಂಗಾಧರೇಶ್ವರ ಸ್ವಾಮೀ ದೇವಾಲಯದ ಉತ್ತರಕ್ಕೆ ಸಮೀಪದಲ್ಲಿ ನಿಮಗೆ "ವಾಟರ್ ಗೇಟ್" ಎಂದು ಇಂಗ್ಲೀಷಿನಲ್ಲಿ ನಾಮ ಫಲಕ ಹೊತ್ತ ಒಂದು ಕಮಾನು ಸುರಂಗ ಕಾಣಿಸುತ್ತದೆ.ಅದರ ಸಮೀಪ ಹೋದರೆನಿಮಗೆ ಒಂದು ಕಾಲು ಹಾದಿ ನಿಮ್ಮನ್ನು ಕಾವೇರಿ ನದಿಯೆಡೆಗೆ ಕರೆದೊಯ್ಯುತ್ತದೆ . ಬಹಳ ಹಿಂದೆ ಅರಮನೆಯ ಪ್ರಮುಖರು ಕಾವೇರಿ ನದಿಗೆ ತೆರಳಲು ಈ ಸುರಂಗ ಬಾಗಿಲನ್ನು ಉಪಯೋಗಿಸುತ್ತಿದ್ದರೆಂದು ಹೇಳಲಾಗುತ್ತದೆ.

1799 ರ ಮೇ ೪ ರಂದು ನಡೆದ ಅಂತಿಮ ಯುದ್ದದಲ್ಲಿ ಬ್ರಿಟೀಷರೊಡನೆ ಕಾದಾಡಲು ಹೋದ ಟಿಪ್ಪೂ ಸುಲ್ತಾನನು ಈ ಪ್ರದೇಶದ ವಾಟರ್ ಗೇಟ್ ಹೊಕ್ಕನೆಂದೂ ಕಾದಾಟದ ಒಂದು ಘಟ್ಟದಲ್ಲಿ ಕೆಲವು ಕುತಂತ್ರಿಗಳ ಸಂಚಿನಿಂದ ಇಲ್ಲಿನ ಬಾಗಿಲನ್ನು ಮುಚ್ಚಲಾಯಿತೆಂದು ಇದರಿಂದಾಗಿ ಟಿಪ್ಪೂ ಸುಲ್ತಾನ್ ವೈರಿಗಳ ಹೊಡೆತಕ್ಕೆ ಸಿಕ್ಕಿ ವೀರ ಮರಣ ಹೊಂದಿದನೆಂದೂ ತಿಳಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಹಲವಾರು ದಾಖಲೆಗಳು ಹೇಳಿದರೂ ಮತ್ತಷ್ಟು ದಾಖಲೆಗಳು ಟಿಪ್ಪು ಸುಲ್ತಾನ್ ಇಲ್ಲಿ ಮರಣ ಹೊಂದಲಿಲ್ಲವೆಂದೂ ಈ ಸ್ಮಾರಕ ದ ಪೂರ್ವಕ್ಕೆ ೧೦೦ ಯಾರ್ಡ್ ನಲ್ಲಿ ಸ್ತಾಪಿಸಲಾಗಿರುವ ಸ್ಮಾರಕವೇ ನಿಜವಾದ ನಿಖರವಾದ ಸ್ಮಾರಕವೆಂದು ಹೇಳುತ್ತಿವೆ.ಆದರೆ ಅತೀ ಹೆಚ್ಚಿನ ದಾಖಲೆಗಳು ಪ್ರತಿ ಪಾದಿಸುತ್ತಿರುವುದು, ಗೆಜೆಟ್ ಗಳಲ್ಲಿನ ಮಾಹಿತಿಗಳು ಹಾಗು ಅಂತರ್ಜಾಲದಲ್ಲಿ ಸಿಗುತ್ತಿರುವ ಮಾಹಿತಿಗಳು ಟಿಪ್ಪೂ ಸುಲ್ತಾನ್ ಮರಣ ಹೊಂದಿದ ಸ್ಥಳವೆಂದು "ವಾಟರ್ ಗೇಟ್" ನತ್ತ ಬೆರಳು ತೋರುತ್ತಿವೆ. ಇದರಲ್ಲಿ ಸತ್ಯವೇನೆಂಬ ಬಗ್ಗೆ ಇನ್ನೂ ಹೆಚ್ಚಿನ ಪರಿಶೀಲನೆ , ಸಂಶೋದನೆ ಅಗತ್ಯ ವಿದೆ. ಆದರೂ ಈ ಎರಡು ಸ್ಮಾರಕಗಳ ಸಮೀಪ ಎಲ್ಲೋ ಒಂದು ಕಡೆ ಟಿಪ್ಪೂ ವೀರಮರಣ ಹೊಂದಿದನೆಂದು ಬಾವಿಸಬಹುದು.ಮೈಸೂರಿನ ಇತಿಹಾಸದ ಒಬ್ಬ ಪ್ರಮುಖ ಪಾತ್ರದಾರಿ , ಶ್ರೀ ರಂಗಪಟ್ಟಣದ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ವೈಭವೀಕರಿಸಿದ ಟಿಪ್ಪೂ ಸುಲ್ತಾನ ಇಲ್ಲಿ ತನ್ನ ಅಂತಿಮ ಪಯಣ ಮುಗಿಸಿದ್ದ!!!!, ಆದಕಾರಣ ಈ ಸ್ಮಾರಕಗಳು ಐತಿಹಾಸಿಕ ದೃಷ್ಟಿಯಿಂದ ಪ್ರಮುಖವಾಗಿವೆ. ಟಿಪೂ ಸುಲ್ತಾನನ ದೇಹ ಸಿಕ್ಕಿದ ಜಾಗವೆಂದು ಗುರುತಿಸಲಾಗಿರುವ ಪ್ರದೇಶದಲ್ಲಿ ಒಂದು ಸ್ಮಾರಕ ನಿರ್ಮಿಸಲಾಗಿದ್ದು ಅದರ ಚಿತ್ರಗಳು ಇಲ್ಲಿವೆ ಈ ಸಂಚಿಕೆಯಲ್ಲಿ ಎರಡು ಸ್ಮಾರಕಗಳನ್ನು ಪರಿಚಯ ಮಾಡಿದ್ದು ಮುಂದಿನ ಸಂಚಿಕೆಯಲ್ಲಿ ಮತ್ತೊಂದು ಸ್ಮಾರಕ ಪರಿಚಯ ಮಾಡಿಕೊಳ್ಳೋಣ ಅಲ್ಲಿಯವರೆಗೆ ಶುಭ ಸಮಯ.

ಮಂಗಳವಾರ, ನವೆಂಬರ್ 1, 2011

ಶ್ರೀ ರಂಗ ಪಟ್ಟಣದಲ್ಲಿ ಶ್ರೀಗಂಧದ ಶೇಖರಣೆಗೆ ಒಂದು ದಾಸ್ತಾನು ಕೋಠಿ ಇತ್ತು!!! ಅದೇ ಸ್ವಾಮೀ ಸಂದಿಲ್ ಕೋಟಿ!!!!!


ಗತ ಕಾಲದ  ವೈಭವ ಕಳೆದುಕೊಂಡ  ಶ್ರೀ ಗಂಧ ದಾಸ್ತಾನು ಕೋಠಿ

ಬಹಳ ದಿನಗಳ ನಂತರ ಮತ್ತೆ ನನ್ನನ್ನು  ಇಲ್ಲಿಗೆ ಕರೆತಂದ  ವಿಚಾರ ಇದು  . ಹಿಂದಿನ ಸಂಚಿಕೆಯಲ್ಲಿ ನಿಮಗೆ ಗಂಗಾಧರೇಶ್ವರ ಸ್ವಾಮೀ ದೇವಾಲಯ ಪರಿಚಯ ಮಾಡಿಕೊಟ್ಟಿದ್ದೆ.   ಅದಕ್ಕೆ ಸನಿಹದಲ್ಲೇ  ಕಂಡುಬರುವುದು ಈ ಸ್ಮಾರಕ . ಹೈದರ್ ಅಲಿ  ಹಾಗು ಟಿಪ್ಪೂ ಸುಲ್ತಾನನ ಕಾಲದ್ದೆಂದು ಹೇಳಲಾಗುವ ಈ ಸ್ಮಾರಕ  ಶ್ರೀ ರಂಗ ಪಟ್ಟಣದ ಪ್ರಮುಖ ಆರ್ಥಿಕ ವಹಿವಾಟಿನ ಕೇಂದ್ರವಾಗಿತ್ತು.  ಹೌದು ಹಿಂದೆ ಆಳ್ವಿಕೆ ನಡೆಸಿದ್ದ ಬಹುಷಃ ಎಲ್ಲಾ  ರಾಜ್ಯಗಳ ರಾಜರು ತಮ್ಮ ರಾಜ್ಯದ ಆರ್ಥಿಕ ಮಟ್ಟ ಹೆಚ್ಚಿಸಲು  ಅಮೂಲ್ಯವಾದ ಉತ್ಪನ್ನಗಳ ರಫ್ತು ಮಾಡಿ ತಮ್ಮ ಖಜಾನೆ ತುಂಬಿಸಿ ಕೊಳ್ಳುತ್ತಿದ್ದರು . ಅಂತಹ ಒಂದು ಪ್ರಮುಖ ದಾಸ್ತಾನು ಮಳಿಗೆ ಇದು . ದಕ್ಷಿಣ ಕರ್ನಾಟಕ ಪ್ರಾಂತ ಶ್ರೀ ಗಂಧದ  ಮರಗಳಿಗೆ ಹೆಸರುವಾಸಿ. ಈ ಮರಗಳ ಉತ್ಪನ್ನ ಮಾರಾಟ ಮಾಡಿ ಅಂದು ಅತೀ ಹೆಚ್ಚು ಲಾಭ ಮಾಡಿಕೊಂಡವರು ಹೈದರ್ ಹಾಗು ಟಿಪ್ಪೂ ಸುಲ್ತಾನ್.  ಅಂದಿನ ಕಾಲದಲ್ಲಿ ಶ್ರೀಗಂಧ ಮರದ ಮಾರಾಟ ಅತೀ ಲಾಭ ಕೊಡುವ ಆರ್ಥಿಕ  ವಹಿವಾಟು ಆಗಿತ್ತೆಂದು     ತೋರುತ್ತದೆ.ಇಂತಹ ಅಮೂಲ್ಯ ಶ್ರೀ ಗಂಧದ ಮರಗಳನ್ನು ,ಹಾಗು ಉತ್ಪನ್ನಗಳನ್ನು ಸಂರಕ್ಷಿಸಲು  ಹಾಗು ವಹಿವಾಟು ನಡೆಸಲು ಇದ್ದ ಕೇಂದ್ರವೇ ಈ  "ಸೆಂದಿಲ್ ಕೋಠಿ "
ಅಂದಿನ ವೈಭವದ ಸಂದಲ್  ಕೋಟಿ[ ಚಿತ್ರ ಕೃಪೆ ಅಂತರ್ಜಾಲ]

  ಅಂದು ಈ ಕೋಠಿಯ ವೈಭವ ತೋರುವ ಅಪರೂಪದ ಹಳೆಯ ಚಿತ್ರ  ಇಲ್ಲಿದೆ ನೋಡಿ  ಅದರ ರಕ್ಷಣೆಗೆ ನಿಂತ ಸಿಬ್ಬಂಧಿಗಳನ್ನೂ ನೀವು ಚಿತ್ರದಲ್ಲಿ ಕಾಣಬಹುದು. ಈ ಚಿತ್ರ ಸುಮಾರು ಒಂದು ನೂರ ಇಪ್ಪತ್ತು ವರ್ಷಗಳ ಹಿಂದೆ ತೆಗೆಯಲಾಗಿದ್ದು  ಇತಿಹಾಸದ ವೈಭವದ ದಿನಗಳನ್ನು ಜ್ಞಾಪಿಸುತ್ತದೆ. ಸ್ವಲ್ಪ ಗಮನಿಸಿ  ಕೋಠಿಯ  ಪ್ರವೇಶ ದ್ವಾರದಲ್ಲಿ  ಶ್ರೀ ಗಂಧದ ಮರದ ತುಂಡುಗಳಿಂದ ಕಲಾತ್ಮಕವಾಗಿ  ಸಿಂಗರಿಸಿರುವುದನ್ನು ನಾವು ಕಾಣಬಹುದು .ಇಷ್ಟೆಲ್ಲಾ ಮೆರೆದಾಡಿದ  ಈ ಭವ್ಯ ಪ್ರದೇಶದಲ್ಲಿ  ಮೈಸೂರಿನ ಅಂತಿಮ ಯುದ್ದದ ನಂತರ ಇದರ ವಹಿವಾಟು ಸ್ಥಗಿತಗೊಂಡು ಆನಂತರದ ದಿನಗಳಲ್ಲಿ  ಸ್ವಲ್ಪ ಕಾಲ ಪುರಸಭೆ ಕಚೇರಿಯಾಗಿ  ನಂತರ ಈಗ "ಕುಸ್ತಿ"  ಅಖಾಡವಾಗಿ  ನಿಂತಿದೆ.
ಹಾಲಿ ಕುಸ್ತಿ ಅಖಾಡ ಹೀಗಿದೆ 
ಇತಿಹಾಸದ ಅಣಕ ವೆಂದರೆ  ಇದೆ ಅಲ್ಲವೇ?? ಗತಕಾಲದ ನೆನಪಿನಲ್ಲಿ  ಇಲ್ಲಿಂದ ವಿದೇಶಗಳಿಗೆ  ಕನ್ನಡ ಸೀಮೆಯ ಶ್ರೀ ಗಂಧ ರಫ್ತಾಯಿತೆ  ಎಂಬ ಪ್ರಶ್ನೆಗೆ  ಹಾಲಿ ಉತ್ತರವಿಲ್ಲ. ಹಾಗು ಈ ಸ್ಮಾರಕ  ಹೇಗಿತ್ತು ಎಂಬ ಕಲ್ಪನೆ ಇಂದಿನ ಪೀಳಿಗೆಗೆ ಸಿಗುತ್ತಿಲ್ಲ. ಇತಿಹಾಸ ಕೆಣಕಿದರೂ ಹಲವಾರು ಸ್ಮಾರಖಗಳ  ಬಗ್ಗೆ ಮಾಹಿತಿ ಸಿಗುವುದು ಕಷ್ಟವಾಗಿದೆ .ಯಾಕೆಂದ್ರೆ ನಿಜವಾದ ಮಾಹಿತಿ ಕಾಲಗರ್ಭದ ಒಳಗೆ  ಸಿಗಲಾರದಷ್ಟು  ಆಳಕ್ಕೆ ಸೇರಿಬಿಟ್ಟಿದೆ. ಈ ಸ್ಮಾರಕ   ಬಗ್ಗೆ ನನ್ನ ಬಳಿ ಇರುವುದು ಇಷ್ಟೇ ಮುಂದಿನ ಸಾರಿ ಮತ್ತೊಂದು ಸ್ಮಾರಕ  ಪರಿಚಯ ಮಾಡಿ ಕೊಳ್ಳೋಣ. ಅಲ್ಲಿಯವರೆಗೆ  ಶುಭ ಸಮಯ.[

ಸೋಮವಾರ, ಆಗಸ್ಟ್ 8, 2011

ಈ ದ್ವೀಪದಲ್ಲಿ ಹರಿಯಜೋತೆಗೆ ಹರನೂ ಇದ್ದಾನೆ !!!!! ಐತಿಹಾಸಿಕ ಗಂಗಾಧರೇಶ್ವರ ದೇವಾಲಯ ನೋಡೋಣ ಬನ್ನಿ !!!


ಶ್ರೀ ಗಂಗಾಧರೇಶ್ವರ ದೇವಾಲಯ.
ಕಳೆದ ಸಂಚಿಕೆಯಲ್ಲಿ ಲಾಲ್ ಮಹಲ್ ಅರಮನೆಯ ಬಗ್ಗೆ ತಿಳಿದು ಕೊಂಡಿರಿ.ಅದಕ್ಕೆ ಹೊಂದಿಕೊಂಡಂತೆ ಪೂರ್ವ ದಿಕ್ಕಿಗೆ ಮುಖಮಾಡಿರುವ ಒಂದು ದೇವಾಲಯ ನೀವು ನೋಡಬಹುದು. ಅದೇ ಗಂಗಾಧರೇಶ್ವರ ದೇವಾಲಯ.ಹೌದು ಈ ಸುಂದರ ದ್ವೀಪದಲ್ಲಿ ಹರಿಯ ಜೊತೆಗೆ ಹರನೂ ನೆಲೆಸಿದ್ದಾನೆ. ಈ ದೇವಾಲಯದ ಬಗ್ಗೆ  ಬೆಂಗಳೂರಿನ ಖ್ಯಾತ ಪತ್ರಕರ್ತರಾದ ಶ್ರೀ ರಿಗ್ರೆಟ್ ಐಯ್ಯರ್ ಅವರು ಸಂಕ್ಷಿಪ್ತವಾಗಿ ಹಾಗು ಸುಂದರವಾಗಿ ಮಾಹಿತಿ ಕೈಪಿಡಿ ತಯಾರಿಸಿ  ಉಚಿತವಾಗಿ ಪ್ರಕಟಣೆ ಮಾಡಿದ್ದಾರೆ. ಬನ್ನಿ ಒಂದಷ್ಟು ಮಾಹಿತಿ ತಿಳಿಯೋಣ.ಶ್ರೀರಂಗ ಪಟ್ಟಣದ ಕೋಟೆ ಕಟ್ಟುವ ಮುನ್ನ  ಲಿಂಗದ ಮೇಲೆ ಕಾವೇರಿ ಹರಿದು ಹೋಗುತ್ತಿದ್ದ ಕಾರಣ , ಹಾಗು ಶಿವಲಿಂಗ ಕಾವೇರಿ ನದಿಯ ಮಧ್ಯಭಾಗದಲ್ಲಿ ಇದ್ದಕಾರಣ  ಅಂದಿನ ನಾಗರೀಕರು  ನಡುಹೊಳೆ  ಗಂಗಾಧರ " ಎಂಬ ಹೆಸರನ್ನು ಕರೆಯುತ್ತಿದ್ದರು ,ಲಿಂಗದ ಮೇಲೆ ಎಲ್ಲೆಡೆಯಲ್ಲೂ  ಶಿಲೆಯಲ್ಲಿ ಕೂದಲು  ಜಡೆ ರೀತಿಯಲ್ಲಿ  ಮೂಡಿರುವ ಕಾರಣ" ಜಡೆ ಗಂಗಾಧರೇಶ್ವರ" ಅಂತಾನೂ ಕರೆಯಲಾಗುತ್ತಿದೆ. ದ್ವೀಪದಲ್ಲಿ  ನೆಲೆಸಿದ್ದ "ಗೌತಮ ಋಷಿಗಳು " ಚೈತ್ರಮಾಸದ ಚಿತ್ರಾ ಪೂರ್ಣಿಮೆಯಂದು  ಗಂಗಾಧರೆಶ್ವರನನ್ನು  ಪೂಜಿಸಿದ ಕಾರಣ ಇಂದಿಗೂ ಅದೇ ಚಿತ್ರಾ ಪೂರ್ಣಿಮೆಯಂದು  ಈ ದೇವಾಲಯದಲ್ಲಿ  ಬ್ರಹ್ಮ ರಥೋತ್ಸವ ಜರುಗುತ್ತದೆ.                                                       

ಭಾನುವಾರ, ಜುಲೈ 3, 2011

"ಟಿಪ್ಪು ಸುಲ್ತಾನ " ವಾಸಿಸಿದ ಖಾಸಾ ಅರಮನೆ ಈ ಲಾಲ್ ಮೆಹಲ್ !!!!!

ದರ್ಬಾರ್ ಹಾಲ್

ಶ್ರೀ ರಂಗ ಪಟ್ಟಣದ ರಂಗನಾಥನ ದೇವಾಲಯದ ಪೂರ್ವ ದಿಕ್ಕಿಗೆ  ಸಾಗಿ ಅಲ್ಲಿರುವ ವೃತ್ತದಲ್ಲಿ ಎಡಕ್ಕೆ ತಿರುಗಿದರೆ ಸ್ನಾನ ಘಟ್ಟಕ್ಕೆ ದಾರಿ ಸಾಗುತ್ತದೆ , ಆ  ದಾರಿಯಲ್ಲಿ  ಬಲಗಡೆ  ಸುತ್ತಲೂ ಜಾಲರಿ ಹಾಕಿದ  ಒಂದು ಪಾಳು ಗೋಡೆಗಳ ದರ್ಶನ ನಿಮಗೆ ಆಗುತ್ತದೆ . ಆ ಸ್ಮಾರಕವೇ   "ಲಾಲ್  ಮಹಲ್ "  ಅಥವಾ "ಟಿಪ್ಪು ಸುಲ್ತಾನ"    ಖಾಸಾ ಅರಮನೆ .  
ಲಾಲ್ ಮೆಹಲ್ ಒಳಗಿನ ಮೆಟ್ಟಿಲುಗಳು
      
ಈ ಅರಮನೆ ಬಗ್ಗೆ ಹೆಚ್ಚಿನ ಮಾಹಿತಿ ಶ್ರೀ ರಂಗ ಪಟ್ಟಣ ಅಥವಾ ರಾಜ್ಯದ/ದೇಶದ  ಅಧಿಕೃತ ದಾಖಲೆಗಳಲ್ಲಿ  ಇಲ್ಲವಾದರೂ  ಕೆಲವು ವಿದೇಶಿ ಪ್ರಕಟಣೆ ಗಳ  ಪುಸ್ತಕ /ಅಂತರಜಾಲದಲ್ಲಿ ಜಾಲಾಡಿದಾಗ ಅಲ್ಪ ಸ್ವಲ್ಪ ಮಾಹಿತಿ ದೊರಕುತ್ತದೆ. ಬನ್ನಿ" ಲಾಲ್ ಮಹಲ್ " ಬಗ್ಗೆ ತಿಳಿಯೋಣ"ಲಾಲ ಮಹಲ್ " ಅಂದರೆ ಕೆಂಪು ಅರಮನೆ ಎಂದು ಅರ್ಥ. ಈ ಅರಮನೆಯ ಗೋಡೆಗಳೆಲ್ಲಾ ಕೆಂಪು ಬಣ್ಣದಿಂದ ಕೂಡಿದ್ದು ಈ ಹೆಸರು ಬರಲು ಕಾರಣವೆಂದು ತಿಳಿಯುತ್ತದೆ. ಕೆಳಗಡೆ ವಿಶಾಲವಾದ "ದರ್ಭಾರ್ ಹಾಲ್" ಹೊಂದಿದ್ದು ಎರಡು  ಅಂತಸ್ತಿನ ಈ ಅರಮನೆ  ಅತ್ಯಂತ ಬಿಗಿ ಬಂದೋಬಸ್ತ್  ಹೊಂದಿತ್ತು.  ಟಿಪ್ಪು ಸುಲ್ತಾನ ನ ಖಾಸಗಿ ಜೀವನ ಈ ಅರಮನೆಯಲ್ಲಿ ಕಳೆದಿತ್ತು. ಉತ್ತಮವಾದ ಪುಸ್ತಕಸಂಗ್ರಹ , ಜನಾನ[ ಟಿಪ್ಪೂ ಪತ್ನಿಯರ ವಾಸ ], ಅವನ ಅಮೂಲ್ಯ  ಸಂಪತ್ತಿನ ಸಂಗ್ರಹ , ಚಿನ್ನದಸಿಂಹಾಸನ ಎಲ್ಲವೂ ಬ್ರಿಟೀಷರಿಗೆ ದೊರೆತದ್ದು  ಇಲ್ಲಿಯೇ. ಅರಮನೆಯ  ಕೆಂಪು ಗೋಡೆಗಳ  ಮೇಲೆ ಚಿನ್ನ ಲೇಪಿತ ಅಕ್ಷರಗಳಲ್ಲಿ 'ಖುರಾನಿನ ಹಿತೋಕ್ತಿ" ಗಳನ್ನೂ ಬರೆಸಿದ್ದನೆಂದು ಕೆಲವೆಡೆ ಹೇಳಲಾಗಿದೆ .  ಅರಮನೆಯ ಹೊರಗೆ ಹಾಗು ಒಳಗೆ ಹುಲಿಗಳನ್ನು ಸರಪಳಿಗಳಿಂದ ಕಟ್ಟಿ  ಕಾವಲಿಗೆ ನಿಲ್ಲಿಸಲಾಗಿತ್ತೆಂದು ಕೆಲವೆಡೆ  ಹೇಳಲಾಗಿದೆ .                

ಗುರುವಾರ, ಜೂನ್ 23, 2011

ಜಿ.ಬಿ. ಗೇಟು ಏನು ನಿನ್ನ ಗುಟ್ಟು!!! ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ !!!


ಜಿ.ಬಿ.ಗೇಟು !!!!
ಬಹಳ ದಿನಗಳ ನಂತರ ಮತ್ತೊಮ್ಮೆ ಈ ಬ್ಲಾಗ್  ಬರೆಯಲು ಕುಳಿತೆ , ಯಾರಿಗೂ ಬೇಡದ ವಿಚಾರ ವನ್ನು ತಿಳಿಸುವುದು ಬೇಡವೆಂದು ಅನ್ನಿಸಿತ್ತು ಆದರೂ ನನ್ನ ಮನಸ್ಸಿನ ಸಂತೋಷಕ್ಕೆ ಬರೆಯಲು ಕುಳಿತೆ ."ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ".ಮುಂದೊಮ್ಮೆ ಯಾರಿಗಾದರು  ಈ ಮಾಹಿತಿ ಖಂಡಿತಾ ಅನುಕೂಲ ವಾಗಬಹುದೆಂಬ ನಂಬಿಕೆ ನನಗಿದೆ,  ಶ್ರೀ ರಂಗ ಪಟ್ಟಣದ ರಂಗನಾಥನ ದೇವಾಲಯದ ಸಮೀಪ ಉತ್ತರಕ್ಕೆ ಕೋಟೆಯೊಳಗೆ ಒಂದು ಸಣ್ಣ ಬಾಗಿಲು ನಿಮ್ಮನ್ನು ಸೆಳೆಯುತ್ತದೆ !!. ಅದೇ ಜಿ.ಬಿ.ಗೇಟ್ ಅಂತ ಕರೆಯುವ ಬಾಗಿಲು.ಈ ಬಾಗಿಲಿಗೆ ಜಿ.ಬಿ. ಗೇಟ್ ಅಂತ ಹೆಸರು ಹೇಗೆ ಬಂತು ಎಂಬ ಮಾಹಿತಿ ಎಲ್ಲಿಯೂ ದಾಖಾಲಾಗಿರುವುದು ಕಂಡುಬಂದಿಲ್ಲ !![ಕೆಲವರು ಹೇಳುವಂತೆ ಈ ಗೇಟ್ ಅನ್ನು gate where the british enterd ಎಂದು ತಿಳಿಸುತ್ತಾರೆ! ಈ ಬಗ್ಗೆ ವಿವರ ತಿಳಿದಿಲ್ಲ ]ತನ್ನ ಗುಟ್ಟನ್ನು ಬಿಟ್ಟು ಕೊಡದ ಈ ಗೇಟಿನ ಆವರಣದೊಳಗೆ ಒಂದು ಹನುಮಂತನ ದೇವಾಲಯವಿದ್ದು ಕೋಟೆಯೊಳಗೆ ಸೇರಿಕೊಂಡಿದೆ .ಒಟ್ಟಿನಲ್ಲಿ ಜಿ.ಬಿ.ಗೇಟು ತನ್ನ ಗುಟ್ಟನ್ನು ಬಿಡದೆ ಗತಿಸಿಹ ಇತಿಹಾಸದ ಘಟನೆಗಳ ಮೂಕ ಸಾಕ್ಷಿಯಾಗಿ ಎಲೆಮರೆ ಕಾಯಿ ಯಂತಿದೆ.....! { ಇದರ ಬಗ್ಗೆ ಮಾಹಿತಿ ಇದ್ದವರು ಮಾಹಿತಿ ನೀಡಲು ಕೋರಿದೆ}ಆದರೆ ಕೆಲವು ದಾಖಲೆಗಳಲ್ಲಿ ಈ ಬಾಗಿಲಿನ ಮೂಲಕ ಬಾಂಬೆ ಸೈನ್ಯ ವನ್ನು ಯುದ್ದದಲ್ಲಿ ಎದುರಿಸಲಾಯಿತೆಂದು ಹೇಳಲಾಗಿದೆ . ಬನ್ನಿ ಒಳಗಡೆ ಹೋಗೋಣ  ಜಿ ಬಿ ಗೇಟಿನ ಒಳಗಡೆ ಬಾಗಿಲನ್ನು ಪ್ರವೇಶಿಸಿದರೆ ಮೆಟ್ಟಿಲುಗಳನ್ನು ಇಳಿದು ನಡೆದರೆ ನಿಮ್ಮ ಎಡ ಭಾಗಕ್ಕೆ  ಒಂದು ಆವರಣ ಗೋಚರಿಸುತ್ತದೆ ಇದು ಕೋಟೆಯ ಗೋಡೆಯೊಳಗೆ ಅವಿತು ಕೊಂಡಿದೆ. ಹೊರಗಡೆ ಕಾಣುವುದಿಲ್ಲ.ಹಾಗೆ ಎಡಗಡೆ ಸಿಗುವ ಹಜಾರ ಪ್ರವೇಶಿಸಿದರೆ  ಹನುಮನ ವಿಗ್ರಹ ಸಿಗುತ್ತದೆ  ದರ್ಶನ ಪಡೆದು ಮುಂದುವರೆದರೆ ಮತ್ತೊಂದು ಬಾಗಿಲು ನಿಮಗೆ ಕೋಟೆಯ ಪಕ್ಕದಲ್ಲಿ ಹರಿಯುವ ಕಾವೇರಿ ನಧಿಯ ದರ್ಶನ ಮಾಡಿಸುತ್ತದೆ
ಜಿ.ಬಿ.ಗೇಟು ಒಳಗಡೆ  ಕಾಣುವ ಹನುಮ ಸನ್ನಿಧಿ!!!!
ಜಿ ಬಿ.ಗೇಟಿನ ಒಳಗಡೆ ಹನುಮ ದೇಗುಲದಲ್ಲಿನ ಹಜಾರ!!!!!
ಈ ಗೇಟಿನಿಂದ ಹೊರ ಬಂದ ಸೈನ್ಯ ಬಾಂಬೆ ಸೈನ್ಯನ್ನು ಎದುರಿಸಿತಂತೆ!!!!!

 ಇದೆ ಬಾಗಿಲಿನ ಮೂಲಕ ಟಿಪ್ಪುವಿನ ಸೈನ್ಯ ಬಾಂಬೆಯ ಸೈನ್ಯ ವನ್ನು ಎದುರಿಸಿತೆಂದು ಹೇಳುತ್ತಾರೆ.ಹಾಗೆ ಮುಂದುವರೆದು ನಡೆದ ನನಗೆ ಒಣಗಿದ ನದಿಯಲ್ಲಿ  ಒಂದು ಶಿಲ್ಪಕಲಾ ಕೃತಿ  ಕಂಡು ಬಂತು.

ಭಾನುವಾರ, ಫೆಬ್ರವರಿ 20, 2011

ಕರ್ನಲ್ ಬೈಲೀ ಡನ್ಜನ್ ಹಾಗು ಪ್ರವಾಸಿಗಳು ಅವರಿಗೆ ತಕ್ಕ ಗೈಡುಗಳು!!!


ಬನ್ನಿ  ಇಲ್ಲೊಂದು ಜೈಲಿದೆ ಅಲ್ಲಿಗೆ ಭೇಟಿ ಕೊಡೋಣ.ರಂಗನಾಥ ಸ್ವಾಮೀ ದೇವಾಲಯದ ಸ್ವಲ್ಪ ಸಮೀಪ  ಉತ್ತರಕ್ಕೆ ಈ ಜೈಲು ಅಥವಾ  ಡನ್ಜನ್  ಕಾಣಲು ಸಿಗುತ್ತದೆ. ಹೊರಗಡೆ ಇಂದ ನೋಡಿದರೆ ಒಂದು ಕಾವಲು ಬುರುಜಿನಂತೆ ಕಾಣುವ ಇದನ್ನು  "ಸುಲ್ತಾನ್ ಬತೇರಿ " ಎಂದು ಕರೆಯಲಾಗುತ್ತಿತ್ತೆಂದು ಕೆಲವು ಗೆಜೆಟ್ ದಾಖಲೆಗಳು ತಿಳಿಸುತ್ತವೆ.ಈ ಪ್ರದೇಶದಲ್ಲಿ ಅತಿಯಾದ ಬಿಗಿ ಕಾವಲು ಪಡೆಗೆ ಸೈನಿಕರನ್ನು ನಿಯೋಜಿಸಲಾಗುತ್ತಿತ್ತೆಂದು ತಿಳಿದುಬರುತ್ತದೆ. ಕಾವಲು ಬತೇರಿ ಕೆಳಗೆ ನೆಲಮಾಳಿಗೆ ಯಲ್ಲಿ ಜೈಲು ನಿರ್ಮಾಣವಾಗಿದ್ದು  ಆಂಗ್ಲ  ಅಧಿಕಾರಿಗಳನ್ನು ಇಲ್ಲಿ ಸೆರೆಯಲ್ಲಿ ಇಟ್ಟಿದ್ದರೆಂದು ತಿಳಿದುಬರುತ್ತದೆ.ಹಾಗೆ ಸೆರೆಯಲ್ಲಿಟ್ಟ ಅಧಿಕಾರಿಗಳಲ್ಲಿ "ಕರ್ನಲ್ ಬೈಲಿ" ಸಹ ಸೆರೆಯಲ್ಲಿದ್ದನೆಂದು ,ತಿಳಿಸಲಾಗಿದೆ . ನಂತರ ಇವನು ಶ್ರೀ ರಂಗ ಪಟ್ಟಣ ಅಂತಿಮ ಯುದ್ದದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಗಿ ತಿಳಿದುಬರುತ್ತದೆ. ಹಾಗಾಗಿ ಈ ಜೈಲಿಗೆ ಕರ್ನಲ್ ಬೈಲೀ ದಂಜನ್ಎಂದು ಕರೆಯಲಾಗಿದೆ  ಎಂದು ತಿಳಿಸುತ್ತಾರೆ.ಇದರ ಬಗ್ಗೆ ಸರಿಯಾದ ಮಾಹಿತಿ ಹೊರಬರಬೇಕಾಗಿದೆ.ಏನೇ ಇರಲಿ ಹಾಲಿ ಇದನ್ನು ಕರ್ನಲ್ ಬೈಲೀ ದಂಜನ್ ಅಂತಾನೆ ಕರೀತಾರೆ.                      ಈ ನೆಲಮಾಳಿಗೆಯ ಜೈಲು 100x 40 ಅಡಿ ಇದ್ದು  ಚಪ್ಪಟೆ ಆಕಾರದ    ಇಟ್ಟಿಗೆ ಹಾಗು ಗಚ್ಚುಗಾರೆಯಿಂದ ನಿರ್ಮಿತಗೊಂಡಿದೆ. ಕೈಧಿಗಳನ್ನು ಇಲ್ಲಿ ಕಲ್ಲಿನ ಗೂಟಗಳಿಗೆ ಕಬ್ಬಿಣದ ಸರಪಣಿಹಾಕಿ   ಕಟ್ಟಿಹಾಕುತ್ತಿದ್ದರೆಂದು ತಿಳಿದುಬರುತ್ತದೆ. ಇದರ ಪ್ರಾತ್ಯಕ್ಷಿಕೆಯನ್ನು ನನ್ನ ಸ್ನೇಹಿತ ಸತ್ಯ ರವರು ತೋರಿದ್ದು ಹೀಗೆ . ಅಬೇದ್ಯವಾದ ಈ ಜೈಲಿನಲ್ಲಿ ಖೈದಿ ಅಷ್ಟು ಸುಲಭವಾಗಿ ತಪ್ಪಿಸಿಕೊಳ್ಳಲು ಆಗುತ್ತಿರಲಿಲ್ಲ. ಬನ್ನಿ ಇಲ್ಲೊಂದು  ವಿಶೇಷವಿದೆ. ಜಲಿನ ಮಧ್ಯಭಾಗದಲ್ಲಿ  ಒಂದು ದೊಡ್ಡ  ಪಿರಂಗಿ  ಬಿದ್ದಿದೆ. ಇಲ್ಲಿಗೆ ಬರುವ ಪ್ರವಾಸಿಗಳಿಗೆ ಕೆಲವು ಕೆಲವು ಗೈಡುಗಳು ಹೇಳುತ್ತಿದ್ದ ವಿಚಾರ ಅಚ್ಚರಿಮೂಡಿಸುತ್ತದೆ. ಆಗತಾನೆ ಬಂದ  ಪ್ರವಾಸಿಗಳ ಗುಂಪಿಗೆ ಒಬ್ಬ ಗೈಡ್ ಹೇಳುತ್ತಿದ್ದ " ನೋಡಿ ಸಾರ್ ಈ ಪಿರಂಗಿ ಇದ್ಯಲ್ಲಾ ಇದನ್ನು ಬ್ರಿಟೀಷರು  ಶ್ರೀ ರಂಗಪಟ್ಟಣ  ಯುದ್ದ ಮಾಡುವಾಗ ಕರಿ ಘಟ್ಟ ಬೆಟ್ಟದಿಂದ ಹಾರಿಸಿದರು ಅಲ್ಲಿಂದ ಹಾರಿಕೊಂಡು ಬಂದ ಈ ಪಿರಂಗಿ ಇಲ್ಲಿಗೆ  ಬಂದು ಬಿದ್ದಿದೆ."ಎಂದು ತನ್ನ ಲಾಜಿಕ್ ಹೇಳಿದ್ದ.[ಪಾಪ ಪಿರಂಗಿ ಗುಂಡು ಹಾರುತ್ತದೆಯೇ ಹೊರತಾಗಿ ಪಿರಂಗಿ ಹಾರುತ್ತದೆಂಬ ಅವನ ಮಾತನ್ನು  ಸರಿಪಡಿಸುವವರು ಯಾರೂ ಇಲ್ಲ.] ಇದನ್ನು ಯೋಚಿಸದ  ಪ್ರವಾಸಿಗರು  ಅವನು ಹೇಳಿದ ಇತಿಹಾಸ ಕೇಳಿಕೊಂಡು ಅವನಿಗೆ ತಮ್ಮ ಕಾಣಿಕೆ ನೀಡಿದ್ದರು.          ಆದರೆ ವಾಸ್ತವವಾಗಿ ಇದು ಅಂತಿಮ ಮೈಸೂರು ಯುದ್ದದ ಸಮಯದಲ್ಲಿ  ಬುರುಜಿನ ಮೇಲಿದ್ದ ಈ ಪಿರಂಗಿ  ಗುಂಡು ಹಾರಿಸಿದ ರಭಸಕ್ಕೆ  ಹಿಂದೆ ಸರಿದು ಆಯ  ತಪ್ಪಿ ಚಾವಣಿಯನ್ನು ತೂತುಮಾಡಿಕೊಂಡು ಬಂದು  ಕೆಳಗೆ ಬಿದ್ದಿದೆ ಎನ್ನುವುದು ನಿಜ ಸಂಗತಿ. ಪ್ರವಾಸದ ಒತ್ತಡದಲ್ಲಿ ಪ್ರವಾಸಿಗಳು  ಗೈಡುಗಳು ಹೇಳಿದ ಮಾಹಿತಿಯನ್ನು ಪರಿಶೀಲಿಸದೆ  ಹೇಳಿದ್ದನ್ನು ಒಪ್ಪಿಕೊಂಡು  ಹಣ ಕೊಟ್ಟು ಹೊರಡುತ್ತಾರೆ. ನಿಜವಾದ ಇತಿಹಾಸ ತಿಳಿದು ಮಾಹಿತಿ ನೀಡುವ ಗೈಡುಗಳ ಕೊರತೆ ಇರುವುದು  , ಗೈದುಗಳು ಇದ್ದರೂ ಅವರಿಗೆ ಇತಿಹಾಸದ  ಅರಿವಿಲ್ಲದೆ ತಪ್ಪು ತಿಳುವಳಿಕೆ ಮೂಡಿ  ಇಂತಹ ಅವಗಡಗಳಿಗೆ ಕಾರಣವಾಗಿದ್ದು. ಈ ಕೊರತೆ ನೀಗಿಸಬೇಕಾಗಿದೆ.  ನೀವು ಮುಂದೊಮ್ಮೆ ಇಲ್ಲಿಗೆ ಬಂದಾಗ ಈ ಮಾಹಿತಿಯನ್ನು ಗೈಡುಗಳಲ್ಲಿ ಪರೀಕ್ಷಿಸಿನೋಡಿ. ಮುಂದಿನ ಸಂಚಿಕೆಯಲ್ಲಿ  ಮತ್ತೊಂದು ಸ್ಮಾರಕದ ಬಗ್ಗೆ ಮಾಹಿತಿ ನೀಡುವೆ  ವಂದನೆಗಳು.

ಸೋಮವಾರ, ಫೆಬ್ರವರಿ 7, 2011

ದ್ವೀಪದಲ್ಲಿ ಕಂಡಿತ್ತು ಹಳೆಯ ಮಸೀದಿ!!!! ಹತ್ತಿರದಲ್ಲೇ ಇತಿಹಾಸ ಸಾರಿದ ರೈಲು ನಿಲ್ದಾಣ ತೋರಿದ ಐತಿಹಾಸಿಕ ಕುರುಹು!!!

                                                                                                                  ಶ್ರೀ ರಂಗಪಟ್ಟಣ ದ  ವಿಸ್ಮಯವೇ ಹಾಗೆ ಕಳೆದ ಬಾರಿ ನಿಮಗೆ ಮದ್ದಿನ ಮನೆ ಹಾಗೂ ಗ್ಯಾರಿಸನ್ ಆಸ್ಪತ್ರೆ ಬಗ್ಗೆ ತಿಳಿಸಿದ್ದೆ. ಬನ್ನಿ ಈಗ ಮತ್ತೊಂದು ವಿಸ್ಮಯ ದತ್ತ ಸಾಗೋಣ, ಗ್ಯಾರಿಸನ್ ಆಸ್ಪತ್ರೆ ಯಾ ಹಿಂಬಾಗ ಬಂದರೆ ಕಾಣುತಿತ್ತು ಈ ಮಸೀದಿ , ಬನ್ನಿ ಹಳೆಯ ನೆನಪಿಗೆ ಜಾರೋಣ
          ಈ ಹಳೆಯ  ಮಣ್ಣಿನ ಗೋಡೆಯ ಕಟ್ಟಡ ಇಂದು ಮಾಯವಾಗಿ ಕಂಡು ಬರುವುದಿಲ್ಲ ವಾದರೂ  [ ಹಾಲಿ ಇದು ಅಸ್ತಿತ್ವದಲ್ಲಿ ಇಲ್ಲ ]  manuscripts  and historical records  part-4  ನಲ್ಲಿ  ದಾಖಲಾದ  ಸ್ವಲ್ಪ  ಮಾಹಿತಿ ಪ್ರಕಾರ ಇದು ಇದು ಶ್ರೀ ರಂಗ ಪಟ್ಟಣದ ಹಳೆಯ ಮಸೀದಿ ಎಂದೂ ಟಿಪ್ಪೂ ಸುಲ್ತಾನ್  ಜುಮ್ಮಾ ಮಸೀದಿ ನಿರ್ಮಿಸುವ ವರೆಗೆ  ಶ್ರೀ ರಂಗ ಪಟ್ಟಣದ ಮುಸ್ಲಿಂ ಜನರು ಇಲ್ಲಿಯೇ ಪ್ರಾಥನೆ ಸಲ್ಲಿ ಸುತ್ತಿದ್ದರೆಂದು ಹೇಳಲಾಗಿದೆ.ಇದನ್ನು  ಹಳೆಯ ಜುಮ್ಮಾ ಮಸೀದಿ ಎಂದೂ ಸಹ ಕರೆಯಲಾಗಿದೆ.ಮಣ್ಣಿನ ಗೋಡೆಯ , ಹಳೆಯ ವಿನ್ಯಾಸ ಹೊಂದಿದ ಈ ಮಸೀದಿ ಮರದ ಕಂಬಗಳಿಂದ ಸೌಂದರ್ಯ ಪಡೆದಿತ್ತು .                                                                                                                                                                                                               ಇದರ ಎದುರುಗಡೆ ಕಾಣಸಿಗುವುದೇ ಶ್ರೀ ರಂಗ ಪಟ್ಟಣ ರೈಲು ನಿಲ್ದಾಣ.ರೈಲು ನಿಲ್ದಾಣದ ಹಳಿಗಳನ್ನು ದಾಟಿ ಪ್ಲಾಟ್ ಫಾರ್ಮ್ ಗೆ ಹೋಗುವ ಮೊದಲು ಒಂದು ತರಬೇತಿ  ಕೇಂದ್ರದ ಕಟ್ಟಡ ವಿದೆ ಬನ್ನಿ ಸಮೀಪಕ್ಕೆ ಹೋಗೋಣ                                                                                                                                                                                                   ಈ ಕಟ್ಟಡದಲ್ಲಿ ನಿಮಗೆ ಕೆಲವು ಕಂಬಗಳು ಕಂಡು ಬರುತ್ತವೆ .ಇವುಗಳಿಗೆ ಬಣ್ಣ ಬಳಿದು ಮಸುಕಾಗಿದ್ದರೂ    ಈ ಕಂಬಗಳನ್ನು ಟಿಪ್ಪೂ ವಿನ ಅರಮನೆಯಿಂದ [ ಲಾಲ್ ಮಹಲ್]   ತಂದು  ಇಲ್ಲಿ ಉಪಯೋಗಿಸಿ ಕೊಂಡಿರುವುದಾಗಿ  ತಿಳಿದು ಬರುತ್ತದೆ. [ ಮುಂದೆ ಲಾಲ್ ಮಹಲ್ ಬಗ್ಗೆ ಬರೆಯುವಾಗ ಈ ಬಗ್ಗೆ ತಿಳಿಯೋಣ ]  ಅರಮನೆಯಲ್ಲಿ ಮೆರೆದಿದ್ದ ಕಂಬಗಳು ರೈಲು ನಿಲ್ದಾಣದಲ್ಲಿ ಇತಿಹಾಸ ಸಾರುತ್ತಾ, ಗತ ವೈಭವ ನೆನೆಯುತ್ತಾ ನಿಂತಿವೆ.                                                                                                                                

ಭಾನುವಾರ, ಜನವರಿ 30, 2011

ಮದ್ದಿನ ಮನೆ ಹಾಗೂ ಗ್ಯಾರಿಸನ್ ಆಸ್ಪತ್ರೆ!!! ಮರೆಯಾಗುತ್ತಿರುವ ನೆನಪುಗಳು !!!

ಶ್ರೀ ರಂಗಪಟ್ಟಣದ  ಸ್ಮಾರಕ ಪರ್ಯಟನೆ ಯಾತ್ರೆಯಲ್ಲಿ ಕಳೆದಬಾರಿ  ಡೆಲ್ಲಿ ಗೇಟ್ ಬಗ್ಗೆ ಮಾಹಿತಿ ನೀಡಿದ್ದೆ, ಬನ್ನಿ ಇನ್ನೊಂದು ವಿಸ್ಮಯ ಸ್ಮಾರಕ ಪರಿಚಯ ಮಾಡಿಕೊಳ್ಳೋಣ.ಶ್ರೀರಂಗಪಟ್ಟಣ  ದಲ್ಲಿ  ನಿಮಗೆ ಕೆಲವುಕಡೆ " ಪಿರಮಿಡ್ " ಆಕಾರದ    ಕೆಲವು ಕಟ್ಟಡಕಾಣಲು ಸಿಗುತ್ತವೆ , ಶ್ರೀ ರಂಗಪಟ್ಟಣ ಕ್ಕೂ ಈಜಿಪ್ಟ್ ಗೂ ಏನಾದರೂ ಸಂಭಂದವಿದೆಯಾ ಅಂತಾ ಅನುಮಾನ ಬರುತ್ತೆ . ಆದ್ರೆ ಕ್ಷಮಿಸಿ ಇವುಗಳನ್ನು ಈಜಿಪ್ಟ್ ನವರು ನಿರ್ಮಿಸಿದ್ದಲ್ಲಾ ,                                                                                                                                                              ಇದನ್ನು  ಶ್ರೀ ರಂಗಪಟ್ಟಣ ಕೋಟೆ ಸಂರಕ್ಷಣೆಗೆ ಅಗತ್ಯವಿರುವ ಮದ್ದು ಗುಂಡು ಸಂರಕ್ಷಿಸಲುಹಾಗೂ ಯುದ್ದದ ಸಮಯದಲ್ಲಿ    ಆಯಕಟ್ಟಿನ ಪ್ರದೇಶಗಳಲ್ಲಿ ಕ್ಷಿಪ್ರವಾಗಿ ಕೋಟೆಯ ಎಲ್ಲಾ ಭಾಗಕ್ಕೂ ಮದ್ದು ಗುಂಡುಗಳು ಸರಬರಾಜು ಆಗುವಂತೆ ವೈಜ್ಞಾನಿಕವಾಗಿ  ಯೋಚಿಸಿ ನಿರ್ಮಿಸಿದಂತ ಮದ್ದಿನ ಮನೆಗಳು.                                                                                                                                                                  ಒಳಗಡೆ ಕಾಲಿಟ್ಟರೆ  ನೆಲಮಾಳಿಗೆ ಸಿಗುತ್ತದೆ ಅಲ್ಲಿ ಒಂದು ವಿಶಾಲವಾದ ಪ್ರದೇಶದಲ್ಲಿ ಮದ್ದು ಗುಂಡುಗಳನ್ನು ಸುರಕ್ಷಿತವಾಗಿ ಸಂಗ್ರಹ ಮಾಡುತಿದ್ದುದು ಕಂಡು ಬರುತ್ತದೆ. ಈ ಮನೆಯ ಒಳ ಹೊಕ್ಕರೆ ಬೇಸಿಗೆಯಲ್ಲಿ ತಂಪಾಗಿಯೂ, ಚಳಿಗಾಲದಲ್ಲಿ  ಬೆಚ್ಚಗೆ , ಮಳೆಗಾಲದಲ್ಲಿ ಶೀತವಿಳಿಯದೆ  ಮದ್ದು ಗುಂಡುಗಳು ಪ್ರಕೃತಿ ವಿಕೋಪಕ್ಕೆ ಸಿಲುಕದಂತೆ  ಎಚ್ಚರಿಕೆಯಿಂದ ಈ ಮನೆಯ ನಿರ್ಮಾಣ ಮಾಡಿದ್ದಾರೆ.                                                                                                                                        ಬನ್ನಿ ಹತ್ತಿರದಲ್ಲೇ ಇರುವ ಮತ್ತೊಂದು ವಿಸ್ಮಯ ನೋಡೋಣ                                                                           ಚಿತ್ರದಲ್ಲಿ ಕಾಣುತ್ತಿರುವುದು  ಗ್ಯಾರಿಸನ್ ಆಸ್ಪತ್ರೆ  ಯುದ್ದದ ಸಮಯದಲ್ಲಿ ಗಾಯಗೊಂಡ   ಬ್ರಿಟೀಶ್ ಪರ ಅಧಿಕಾರಿಗಳಿಗೆ, ಸೈನಿಕರಿಗೆ ಇಲ್ಲಿ ಚಿಕಿತ್ಸೆ ನೀದಲಾಗುತ್ತಿತ್ತೆಂದು ಹೇಳುತ್ತಾರೆ.1799 ರಲ್ಲಿ ಇದನ್ನು ಲಾರ್ಡ್ ವೆಲ್ಲೆಸ್ಲಿ [ ಡ್ಯೂಕ್ ಆಫ್ ವೆಲ್ಲಿಂಗ್ಟನ್ ] ನಿರ್ಮಾಣ ಮಾಡಿದನೆಂದು ತಿಳಿದುಬರುತ್ತದೆ.ಹಾಗೂ ಈ ಆಸ್ಪತ್ರೆ ಸುಮಾರು ವರ್ಷ  ತನ್ನ  ಸೇವೆ  ಸಲ್ಲಿಸಿದ್ದಾಗಿ . ತಿಳಿದು ಬರುತ್ತದೆ. ಐತಿಹಾಸಿಕ  ಮಹತ್ವಉಳ್ಳ  ಇಂತಹ  ಸ್ಮಾರಕಗಳು  ಕಣ್ಮರೆಯಾಗುತ್ತಿರುವುದು ಇತಿಹಾಸದ ಅವನತಿಯೇ ಸರಿ.

ಭಾನುವಾರ, ಜನವರಿ 9, 2011

ಡೆಲ್ಲಿ ಬ್ರಿಡ್ಜ್ ಗೇಟಿನ ಒಳಗೆ ಹೊಕ್ಕಾಗ ಅವಿತು ಕುಳಿತಿದ್ದ ಹನುಮ ,ಗಣೇಶ!!!





ಕಳೆದ ಸಂಚಿಕೆಯಲ್ಲಿ ಶ್ರೀ ರಂಗ ಪಟ್ಟಣದ ಅಂತಿಮ ಯುದ್ದದ ನೆನಪಿಗಾಗಿ ನಿರ್ಮಿಸಿರುವ ಶತಮಾನ ದಾಟಿದ ಯುದ್ದ ಸ್ಮಾರಕದ ಬಗ್ಗೆಪರಿಚಯ ಮಾಡಿಕೊಟ್ಟಿದ್ದೆ. ಬನ್ನಿಸನಿಹದಲ್ಲೇ ಇರುವ ಡೆಲ್ಲಿ ಗೇಟಿನ ಒಳಗಡೆ ಹೋಗಿಬರೋಣ.ನಾನು ಹಲವಾರು ಬಾರಿ ಓಡಾಡಿದ್ದರೂ ಕೂಡ ಹಲವು ತಿಂಗಳು ಈ ಜಾಗದ ಪೂರ್ಣ ವಿವರ ತಿಳಿದಿರಲಿಲ್ಲ ,ನಂತರ ಒಬ್ಬ ಸ್ನೇಹಿತರು ನನ್ನನ್ನು ಈ ಜಾಗಕ್ಕೆ ಕರೆದುಕೊಂಡು ಹೋಗಿ ಇದನ್ನು ತೋರಿಸಿದರು.ನಂತರ ನಾನು  ಯುದ್ದ ಸ್ಮಾರಕ  ನೋಡಲು ಬಂದರೆ ಈ ಜಾಗಕ್ಕೆ ತಪ್ಪದೆ ಭೇಟಿ ಕೊಡುತ್ತೇನೆ.ಯುದ್ದ ಸ್ಮಾರಕ ನೋಡಲು ತೆರಳುವ ಹಾದಿಯಲ್ಲಿ ನಿಮಗೆ ಬಲಭಾಗಕ್ಕೆ ಒಂದು ಕಮಾನು ಗೇಟು

 ಕಾಣಿಸುತ್ತದೆ ,ಅದರ  ಕಲ್ಲಿನ ಕಮಾನಿನ ಮೇಲೆ 'GATE TO DELHI BRIDGE''   ಎಂದುಬರೆಯಲಾಗಿದೆ.ನೋಡಿದವರಿಗೆ ಆಶ್ಚರ್ಯ ತರಿಸುವ ಈ ಕಮಾನು ಹೊಕ್ಕಿಒಳ  ನಡೆದರೆ ನಿಮಗೆ ಬೇರೆಯದೇ ದರ್ಶನ ವಾಗುತ್ತದೆ ಅಲ್ಲಾ ಎಲ್ಲಿಯ ಡೆಲ್ಲಿ ಎಲ್ಲಿಯ ಶ್ರೀ ರಂಗ ಪಟ್ಟಣ ಅಂತಾ ಅನ್ನಿಸಲು ಶುರುಮಾಡುತ್ತೆ ,ಬನ್ನಿ ಒಳಗಡೆ ಹೋಗೋಣ .ಅರೆ ಇದೇನು ಇದೆಲ್ಲಾ ಶಿಥಿಲ  ಗೊಂಡ ಕೋಟೆಯ  ಸಾಮ್ರಾಜ್ಯ ಬ್ರಿಟೀಷರ ಸೈನ್ಯದ ದಾಳಿಗೆ ಸಿಕ್ಕಿ ನಲುಗಿದ ಕೋಟೆಯ ಅವಶೇಷಗಳು , ಇವನ್ನು ನೋಡಿ ಮುಂದುವರೆದರೆ  ದಾಳಿಗೂ ಹೆದರದೆ ಜಗ್ಗದೆ ನಿಂತ ಕೋಟೆಯ ಒಳಭಾಗದ ಗೋಡೆಯ ಬುರುಜುಗಳ ದರ್ಶನ ಆಗುತ್ತದೆ. ಸ್ವಲ್ಪ ಮುಂದೆ ಬನ್ನಿ ಇಲ್ಲೊಂದು ಸಣ್ಣ ಬಾಗಿಲು ಇದೆ ಒಳಗಡೆ ಹೋಗೋಣ ಅರೆ ಕಾವೇರಿ ನದಿಯ  ನೀರು ಕಂದಕದಲ್ಲಿ ಕಾಣುತ್ತದೆ . ಬಂದ ಹಾದಿಯಲ್ಲೇ ಮುಂದುವರೆದರೆ  ಗಿಡ ಗಂಟಿ, ಬಳ್ಳಿಗಳಿಂದ  ಮುಚ್ಚಿದ ಒಂದು ಗೋಡೆ ಕಾಣ ಸಿಗುತ್ತದೆ .ಅರೆ ಎತ್ತರದ ಗೋಡೆಯ ಮೇಲೆ ಎರಡುಕಲ್ಲಿನ ಚೌಕಟ್ಟಿನಲ್ಲಿ ಹನುಮಂತ ಹಾಗು ಗಣೇಶನ ವಿಗ್ರಹಗಳ ಮೂರ್ತಿ ಕಾಣಸಿಗುತ್ತವೆ.ಇದನ್ನು ಗೆಜೆಟ್ಟಿನಲ್ಲಿ  ಹಿಂದೂ ವಾಲ್ ಅಥವಾ ವಿಜಯನಗರ ವಾಲ್ ಅಂತಾ ಉಲ್ಲೇಖಿಸಲಾಗಿದೆ.ಹೌದು ಶ್ರೀ ರಂಗ ಪಟ್ಟಣದ ಕೋಟೆಯನ್ನು ಮೊದಲು ವಿಜಯ ನಗರದ ಅರಸರ ಪ್ರತಿನಿಧಿ ನಾಗಮಂಗಲದ ತಿಮ್ಮಣ್ಣ  ದಂಡನಾಯಕ ಕಟ್ಟಿಸಿದ ಎಂಬ ಮಾಹಿತಿ ನಿಮಗೆಲ್ಲಾ ತಿಳಿದೇ ಇದೆ .ಅದರ ಒಂದು ಭಾಗವಾಗಿ ಇದನ್ನು ಉಲ್ಲೇಖಿಸಿರಬಹುದು.ಮುಂದೆ ಸಾಗಲು ಹಾದಿಇಲ್ಲದ  ಕಾರಣ ವಾಪಸ್ಸು ಬರಬೇಕು ಎನ್ನಿಸುತ್ತದೆ ,ಆದರೆ ಹಿಂದೆ ಇಲ್ಲಿ ಡೆಲ್ಲಿ ಬ್ರಿಡ್ಜ್ ಗೆ ಹೋಗಲು ಕಿರು ಸೇತುವೆಗಳನ್ನು ಕಂದಕದಲ್ಲಿ ನಿರ್ಮಿಸಿದ್ದಿರಬಹುದು.ಈಗ ಹಾಗೆ ಹೋಗಲು ಅವಕಾಶವಿಲ್ಲದ ಕಾರಣ ಮತ್ತೆ ಹಿಂತಿರುಗಿ  ಕೋಟೆಯ ಮೇಲೆ ಹತ್ತಿ ನೋಡಿದರೆ ಡೆಲ್ಲಿ ಬ್ರಿಡ್ಜ್ ಇದ್ದ ಜಾಗದ ದರ್ಶನವಾಗುತ್ತದೆ.ಶ್ರೀ ರಂಗ ಪಟ್ಟಣದಿಂದ     ಡೆಲ್ಲಿಗೆ ಹೇಗೆ ಹೋಗುತ್ತಿದ್ದರೋ ತಿಳಿಯದು ಆದರೆ ಈ ದಾರಿಯಿಂದ ಬ್ರಿಡ್ಜ್ ದಾಟಿದರೆ ಹಿರೋಡೆ [ಪಾಂಡವಪುರ ], ಮೇಲುಕೋಟೆ ,ನಾಗಮಂಗಲ,ಮಾಯಸಂದ್ರ ,ನಿಟ್ಟೂರು,ಶಿರಾ,ಪಾವಗಡ,ಗುತ್ತಿ,[ಅಂದ್ರ]ತಲುಪಬಹುದು ಆಗಿನ ಕಾಲದಲ್ಲಿ ಇವೆಲ್ಲಾ ಶ್ರೀ ರಂಗ ಪಟ್ಟಣದ ಟಿಪ್ಪೂ ಆಡಳಿತಕ್ಕೆ ಒಳಪಟ್ಟ ಪ್ರದೇಶವಾಗಿದ್ದವು,ಬಹುಷಃ ಈ ಕಮಾನು ಗೇಟು ಉತ್ತರ ದಿಕ್ಕಿಗೆ ಮುಖ ಮಾಡಿದ ಕಾರಣ ಈ ಹೆಸರು ಬಂತೆಂದು ಕಾಣುತ್ತದೆ. ನಂತರ ಈ ಬ್ರಿಡ್ಜ್ ಅನ್ನು  ಶ್ರೀ ರಂಗ ಪಟ್ಟಣಕ್ಕೆ  ಒದಗುವ ವೈರಿಗಳ  ದಾಳಿಯನ್ನು ತಡೆಗಟ್ಟಲು ಟಿಪ್ಪೂ ಕಾಲದಲ್ಲಿ  ಈ ಬ್ರಿಡ್ಜ್    ಕೆಡವಿಸಿಹಾಕಲಾಯಿತೆಂದು ತಿಳಿದುಬರುತ್ತದೆ ಈ ಬಗ್ಗೆ ಸ್ಪಷ್ಟ ದಾಖಲೆಗಳಿಲ್ಲ.ಆದರೂ ಈ ಕಮಾನು ಗೇಟಿನ ಮೂಲಕ ಹಲವು ಐತಿಹಾಸಿಕ ಘಟನೆಗಳು ಶ್ರೀ ರಂಗ ಪಟ್ಟಣಕ್ಕೆ ಹರಿದು ಬಂದಿರುವುದಂತೂ ಸತ್ಯ .