ಗುರುವಾರ, ನವೆಂಬರ್ 25, 2010

ಮೈಸೂರ ಅರಸರ ಜನ್ಮ ಸ್ಥಳ ಹಾಗು ಪಾಳು ಬಿದ್ದ ಅರಮನೆ.!!!

ಕಳೆದ ಬಾರಿ ಡಿ. ಹ್ಯಾವಿಲೆಂಡ್  ಸೇತುವೆ ಬಗ್ಗೆ ತಿಳಿದುಕೊಂಡ ನಾವು ಮತ್ತೆ ರಂಗನಾಥನ ದೇವಾಲಯ ಸಮೀಪಕ್ಕೆ ಹೋಗೋಣ ಬನ್ನಿ.ರಂಗನ ಆಲಯದಿಂದ ಹೊರಬಂದರೆ  ಅಲ್ಲೇ ಸಮೀಪದಲ್ಲಿ ನಮಗೆ ಮತ್ತೊಂದು ವಿಶೇಷ ತಿಳಿದು ಬರುತ್ತದೆ!!,ನಿಮ್ಮ ಗಮನಕ್ಕೆ ಒಂದು ಬಿಳಿಯ ಬಣ್ಣದ ಒಂದು ಜಾಲರಿ ಮನೆ ಕಾಣ ಸಿಗುತ್ತದೆ.ಹಾಗು ಪಕ್ಕದಲ್ಲೇ ಒಂದು ಪಾರ್ಕ್ ಸಹ ಸಿಗುತ್ತದೆ.ನಿಮಗೆ ಆಶ್ಚರ್ಯ ವಾಗಬಹುದು ಈ ಬಿಳಿಯ ಬಣ್ಣದ  ಮನೆಯಲ್ಲಿ                                                          ಒಂಬತ್ತನೇ ಜುಲೈ 1784 ರಲ್ಲಿ ಮುಮ್ಮಡಿ ಕೃಷ್ಣ ರಾಜ ವೊಡೆಯರ್ ರವರ ಜನನ ವಾಗಿದೆ.ಹಾಗು ಅದಕ್ಕೆ ಸಂಭಂದಿಸಿದ ಶಾಸನ ಒಂದು ಅಲ್ಲಿ ಲಭ್ಯ ವಿದೆ.[ಇದೆ ಜಾಗದಲ್ಲಿ  ಇತಿಹಾಸದ ಬಗ್ಗೆ  ನನ್ನ ಮೊದಲ ಛಾಯ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು ] ಹಾಗು ಈ ಪ್ರದೇಶಕ್ಕೆ ಹೊಂದುಕೊಂಡಂತೆ  ಹಳೆಯ ಅರಮನೆ ಇದ್ದ ಪ್ರದೇಶ ಕಾಣಸಿಗುತ್ತದೆ.ಹೌದು ಇಲ್ಲಿ ಹಿಂದೆ ವಿಜಯ ನಗರ ಪ್ರತಿನಿಧಿ ಹಾಗು ಮೈಸೂರ ಅರಸರ ಅರಮನೆ  ಇಲ್ಲಿ ಇತ್ತೆಂಬ ಬಗ್ಗೆ ಇತಿಹಾಸ ಹೇಳಿದರೂ ಕಾಲ ಚಕ್ರ ದ ಹೊಡೆತಕ್ಕೆ ಸಿಲುಕಿ ಹಲವಾರು ಸಾಕ್ಷಿಗಳು ನಾಶವಾಗಿವೆ. ಸಿಗುವ ಸಾಕ್ಷಿಗಳ ಆಧಾರದ ನೆಲೆ ಇಲ್ಲಿ ಉತ್ತರಾಭಿಮುಕವಾಗಿ ಒಂದು ಅರಮನೆ ಇತ್ತೆಂಬ ಬಗ್ಗೆ ಅಲ್ಪ ಮಾಹಿತಿ ಸಿಗುತ್ತದೆ. ಬನ್ನಿ ಅರಮನೆ ಇದ್ದ ಜಾಗ ನೋಡೋಣ       ಇದೆ ನೋಡಿ ಇತಿಹಾಸದ ಕುರುಹು ಇಂದು ರಕ್ಷಿಸಲಾಗದ ಸ್ಮಾರಕವಾಗಿ ,ಪುನರ್ನಿರ್ಮಾಣಕ್ಕೆ ಪೂರಕವಾದ ಮಾಹಿತಿಗಳು ಇತಿಹಾಸದ ಕಸದ ಬುಟ್ಟಿ ಸೇರಿರುವ ಕಾರಣ ಒಂದು ಉಧ್ಯಾನವನವಾಗಿ  ಮೂಕವಾಗಿ ಮಲಗಿದೆ. ಹಾಗು ಇಂದಿನ ಜನಾಂಗಕ್ಕೆ ಮಾಹಿತಿ ನೀಡಲಾಗದೆ ಮರುಗಿದೆ................................................!!!  ಇಂದಿಗೆ ಇಷ್ಟು ಸಾಕು ಮುಂದೆ ಮತ್ತೊಂದಿಷ್ಟು ಬರಲಿದೆ ನಿಮಗಾಗಿ . ವಂದನೆಗಳು. 

ಶುಕ್ರವಾರ, ನವೆಂಬರ್ 12, 2010

ಶ್ರೀ ರಂಗ ಪಟ್ಟಣದ ಈ ವಿಸ್ಮಯ ತೂಗು ಸೇತುವೆ ಒಂದು ಶತಮಾನ ಬಾಳಿತ್ತು!!!


ಶ್ರೀ ರಂಗ ನಾಥನ ದರ್ಶನ ಪಡೆದು ಪಾವನ ರಾದ ನಿಮಗೆ  ಬನ್ನಿ ಸನಿಹದಲ್ಲೇ ಇರುವ ಒಂದು ವಿಸ್ಮಯ ಸೃಷ್ಟಿಸಿದ್ದ ಜಾಗಕ್ಕೆ ಕರೆದುಕೊಂಡು ಹೋಗುತ್ತೇನೆ,ಇದೇನು ಪಾಳು ಬಿದ್ದ  ಮುರಿದ ಗೋಡೆಯ ಗುಡ್ಡೆಯ ಜಾಗಕ್ಕೆ ಕರೆದುಕೊಂಡು ಬಂದು ಕಿವಿ ಮೇಲೆ ಹೂ ಇಡುತಿದ್ದಾನೆ ಅಂತೀರಾ.ಹೌದು ಇಲ್ಲಿ ನೋಡಿ  ಡಿ. ಹಾವಿಲೆಂದ್ ಎಂಬ ಫ್ರೆಂಚ್ ಇಂಜಿನಿಯರ್ ಒಬ್ಬ ಟಿಪ್ಪೂ ಆಳ್ವಿಕೆಯಲ್ಲಿ ಈ ಕಮಾನು ತೂಗು ಸೇತುವೆ ನಿರ್ಮಿಸಿದುದಾಗಿ ತಿಳಿದು ಬರುತ್ತದೆ.ಈ ಕಮಾನು ಸೇತುವೆ ಕಾಮನ ಬಿಲ್ಲಿನಿನಂತೆ ಬಾಗಿದ್ದು  ಗಾರೆ ಗಚ್ಚಿನಿಂದ ನಿರ್ಮಿತವಾಗಿತ್ತೆಂದೂ 1808 ರಲ್ಲಿ ನಿರ್ಮಿತಗೊಂಡು   ಸೇತುವೆ ಮೇಲೆ ನಿಂತರೆ ತೂಗುಯ್ಯಾಲೆಯಂತೆ  ಸ್ವಲ್ಪ ತೂಗಾಡುತ್ತಿತ್ತೆಂದು ಹೇಳಲಾಗಿದೆ.ಕಾವೇರಿ ನದಿಗೆ ಅಡ್ಡಲಾಗಿ ಶ್ರೀರಂಗ ಪಟ್ಟಣ ದ್ವೀಪ ಸಂಪರ್ಕಿಸಲು ಇಂತಹ   ಸೇತುವೆ ನಿರ್ಮಿಸಲು ಪ್ರಾಯೋಗಿಕವಾಗಿ ಈ 112 ಅಡಿ ಉದ್ದದ ತೂಗುಸೇತುವೆ ನಿರ್ಮಿಸಲಾಗಿತ್ತು .ಈ ಸೇತುವೆಯ ಪೂರ್ಣ ಚಿತ್ರ ಹಾಲಿ ಲಭ್ಯ ವಿಲ್ಲದ ಕಾರಣ  ಅಂತರ್ಜಾಲದಲ್ಲಿ ಹುಡುಕಾಡಿದಾಗ ಒಂದು ಪುಟ್ಟ ಚಿತ್ರ ಸಿಕ್ಕಿದೆ ಅದಷ್ಟೇ ನಮಗೆ ಸಾವಿರ ಕಥೆ ಹೇಳುತ್ತಿದೆ.ಈ ಕಮಾನು ತೂಗು ಸೇತುವೆ 125 ವರ್ಷ ಬಾಳಿ 2-7 -1936 ರಂದು ಕುಸಿದು ಬಿದ್ದಿದೆ.ಬರಿ ಗಾರೆ ಗಚ್ಚಿನಿಂದ ನಿರ್ಮಿಸಿದ ಈ ತೂಗು ಸೇತುವೆ ಇಂದಿನ ಇಂಜಿನಿಯರ್ ಗಳಿಗೆ ಸವಾಲಾಗಿ  ತಾನಿದ್ದ ಸ್ಥಳ ದಲ್ಲಿ ಮತ್ತೊಬ್ಬ ಇಂಜಿನಿಯರ್ ಬಂದು ತನ್ನನ್ನು ಮರು ನಿರ್ಮಾಣ ಮಾಡುವನೇ ಅಂತಾ ಅಂದಿನಿಂದ  ಕಾಯುತ್ತಾ  ಕುಳಿತಿದೆ.
ಲೈಫ್ ಪತ್ರಿಕೆಯಲ್ಲಿ ಹಲವಾರು ದಶಕಗಳ ಹಿಂದೆ ಪ್ರಕಟವಾದ ಚಿತ್ರ.[ ಚಿತ್ರ ಕೃಪೆ ಅಂತರ್ಜಾಲ  ಹಾಗು ಲೈಫ್ ಪತ್ರಿಕೆ ]
ಆದ್ರೆ ಯಾಕೋ ಪಾಪ ಯಾವ ಇಂಜಿನಿಯರ್ ಗಳೂ  ಈ ಸೇತುವೆಯ ಬಗ್ಗೆ ತಲೆ ಕೆಡಿಸ್ಕೊತಾ ಇಲ್ಲ .ಆದರೆ ಅಚ್ಚರಿ ವಿಚಾರವೆಂದರೆ  ಇತ್ತೀಚಿಗೆ ಅಂತರ್ಜಾಲ ಜಾಲಾಡುತ್ತಿದ್ದಾಗ  ಈ ತೂಗು ಸೇತುವೆಯ  ಮೂಲ  ಚಿತ್ರಣದ  ಒಂದು ಚಿತ್ರ ಸಿಕ್ಕಿತು.ಇದು ಈವರೆಗಿನ ಅಧಿಕೃತ ಚಿತ್ರವೆಂದು ಪರಿಗಣಿಸಬಹುದು. ಇದನ್ನು ನೋಡಿದರೆ ತೂಗುಸೇತುವೆ ನಿರ್ಮಾಣದ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಅಂದಿನ ತಾಂತ್ರಿಕತೆಯ ಅದ್ಭುತ ಒಂದು ಮುರಿದ ಸ್ಮಾರಕವಾಗಿ ಶ್ರೀ ರಂಗ ಪಟ್ಟಣ ದಲ್ಲಿ ಪ್ರವಾಸಿಗರಿಗಾಗಿ ಕಾಯುತ್ತಾ ಕುಳಿತಿದೆ. ನೀವೂ ಒಮ್ಮೆ ಹೋಗಿ ನೋಡಿ ಬನ್ನಿ.ನಮಸ್ಕಾರ  ಮತ್ತೆ ಸಿಗೋಣ.