ಭಾನುವಾರ, ಅಕ್ಟೋಬರ್ 24, 2010

ಪಶ್ಚಿಮ ರಂಗನ ಆಲಯದ ಒಳಗೆ !!!ವಿಸ್ಮಯ ಶಿಲ್ಪ ಕಲೆ.!!!

ಇದೇನ್ರೀ ವಿಶ್ರಾಂತಿ ಅಂತ ಹೇಳಿ ಹೋದವ ಪತ್ತೇನೆ ಇಲ್ಲಾ !! ಅಂತಾ ಬೈದಿರ್ತೀರ ಗೊತ್ತು ಕ್ಷಮೆ ಇರಲಿ  ಮಾಹಿತಿ ಕ್ರೂಡೀಕರಣ      ಪರಿಶೀಲನೆ ಇತ್ಯಾದಿ ಗಳಿಂದ ವಿಳಂಭ ವಾಗಿದೆ.ಬನ್ನಿ ಪಶ್ಚಿಮ ರಂಗನ ಆಲಯ ದೊಳಗೆ ತೆರಳೋಣ.ಗರುಡ ಗಂಬದ ಆವರಣದ ಮೂಲಕ ತೆರಳುವಾಗ ನಿಮಗೆ ಎತ್ತರದ ಗರುಡ ಗಂಬ ಚಾವಣಿ ಮೂಲಕ ತೋರಿ ಹೋಗಿರುವುದು ಕಂಡು ಬರುತ್ತದೆ. ಇದು ಇಲ್ಲಿನ ವಿಶೇಷ.  ಮುಂದೆ ಸಾಗೋಣ  ಬನ್ನಿ ಗರುಡ ದೇವನ ಉತ್ಸವ ಮೂರ್ತಿ ಮನಸೆಳೆಯುತ್ತದೆ.ವಿಷ್ಣು ದೇವಾಲಯಗಳಲ್ಲಿ ಸಾಮಾನ್ಯವಾಗಿ ಗರುಡ ವಾಹನ ಉತ್ಸವ ನಡೆಸಲು ಇಂತಹ ಮೂರ್ತಿಗಳನ್ನು ಬಳಸುತ್ತಾರೆ.ಅರೆ ಪಕ್ಕದಲ್ಲೇ ಗಜ ಉತ್ಸವ ಮೂರ್ತಿ ಇದೆ.ಇದು ವಿಶೇಷ ದಿನಗಳಲ್ಲಿ ಮಾತ್ರ ಉಪಯೋಗಿಸಲ್ಪಡುತ್ತದೆ. ಮುಂದೆ ಸಾಗಿ ದ್ವಾರ ಪ್ರವೇಶಿಸಿದರೆ  ಸಿಗುವುದು ಸುಂದರ ದ್ವಜ ಸ್ಥಂಬ  ಇರುವ ಆವರಣ  ವಿಶಿಷ್ಟ  ಶೈಲಿಯಲ್ಲಿ ಕೆತ್ತಿರುವ ಸುಂದರ ವಿವಿಧ ಬಗೆಯ ಕಲ್ಲಿನ ಕಂಬಗಳಲ್ಲಿ ಹೊಯ್ಸಳ ಶಿಲ್ಪಿ ಕಲೆ  ಅನಾವರಣಗೊಳ್ಳುವುದು.ಆವರಣದ ಪ್ರವೇಶ ದ್ವಾರದ ಎಡಕ್ಕೆ ತಿರುಗಿ  ಬನ್ನಿ  " ವೈನತೆಯ ಸ್ವಾಮೀ" ದರ್ಶನ ವಾಗುತ್ತದೆ. ಮುಂದೆ ಸಾಗಿದರೆ ನವರಂಗದ ಪ್ರವೇಶ ಅಲ್ಲಿಯೂ ಅಷ್ಟೇ ಸುಂದರ ಹೊಯ್ಸಳ ಶೈಲಿ ಕೆತ್ತನೆ ಹೊಂದಿದ ಕಲ್ಲು ಕಂಬಗಳು.ಇಲ್ಲಿಂದ ಸಾಗಿದರೆ ನಿಮಗೆ ವಿಶೇಷ ದಿನಗಳಲ್ಲಿ ಕತ್ತಲೆ ಪ್ರದಕ್ಷಿಣೆ  ಅವಕಾಶ ದೊರಕುತ್ತದೆ.ಉತ್ತರಾಯಣ ಪುಣ್ಯ ಕಾಲದಲ್ಲಿ ಈ ಕತ್ತಲೆ ಪ್ರದಕ್ಷಿಣ ದ್ವಾರ ದ ಮೂಲಕ ಕತ್ತಲೆ ಪ್ರಾಕಾರದಲ್ಲಿ [ ಇದು ವರ್ಷಕ್ಕೊಮ್ಮೆ ಮಾತ್ರ ಸಿಗುವ ಅವಕಾಶ ] ಶ್ರೀ ರಂಗನ ಸುತ್ತ ಪ್ರದಕ್ಷಿಣೆ ಬರಬಹುದು.ಕತ್ತಲೆ ಪ್ರದಕ್ಷಿಣೆ ಹಾದಿಯಲ್ಲಿ ಇಡಿ ಗರ್ಭ ಗೃಹ  ನಕ್ಷತ್ರಾಕಾರದಲ್ಲಿ ನಿರ್ಮಿತಗೊಂಡಿರುವುದನ್ನು ಕಾಣಬಹುದು.ಪ್ರದಕ್ಷಿಣೆ ಆಯ್ತು ಬನ್ನಿ ಗರ್ಭಗೃಹ ದತ್ತ ಸಾಗೋಣ ದ್ವಾರದ ಎರಡೂ ಬದಿಯಲ್ಲಿ ಸುಂದರ ದ್ವಾರಪಾಲರ ಮೂರ್ತಿಗಳು ಕಾಣಸಿಗುತ್ತವೆ. ತಲೆ ಎತ್ತಿ ನೋಡಿದರೆ ಗರ್ಭಗೃಹದ ಬಾಗಿಲ ಮೇಲ್ಪಟ್ಟಿಯ ಮೇಲೆ ವಿಷ್ಣು ಅವತಾರಗಳ ಕೆತ್ತನೆ ನೋಡಬಹುದು.ಭಕ್ತಿ ಪರವಶತೆ ಇಂದ ಮುಂದೆ ಬನ್ನಿ ನೋಡಿ ಇವನೇ ನಮ್ಮಗೌತಮ ರಂಗನಾಥ ,ಪಶ್ಚಿಮ ರಂಗನಾಥ,ಆದಿ ರಂಗನಾಥ
ಶ್ರೀ ರಂಗನಾಥ ಸ್ವಾಮಿ  ಮೂಲ ದೇವರು [ ಚಿತ್ರ ಕೃಪೆ ಗೂಗಲ್ ಇಮೇಜಸ್ ಅಂತರ್ಜಾಲ ]
ಒಟ್ಟಿನಲ್ಲಿ ಭಕ್ತರ ಇಷ್ಟದ ರಂಗನಾಥ!!! ಹೆಡೆ  ಬಿಚ್ಚಿದ ಶೇಷ ಶಯನದಲ್ಲಿ ಪವಡಿಸಿಹ ರಂಗನಾಥ ತನ್ನ  ಬಲಗೈಯನ್ನು  ಮಡಿಸಿ ತಲೆಗೆ ಆಸರೆ ನೀಡಿ  ಎಡಗೈಯನ್ನು ದೇಹಕ್ಕೆ ಸಮನಾಗಿ ಚಾಚಿ ಕಿರೀಟ ಧಾರಿಯಾಗಿ ಪೂರ್ವಕ್ಕೆ ಮುಖಮಾಡಿ  ಮಲಗಿದ್ದಾನೆ  ಪಾದದ ಬಳಿ ಕಾವೇರಿ ಕುಳಿತು ಸೇವೆ ಮಾಡುತಿರಲು ಗೌತಮ ಋಷಿಗಳು ಪಾದದ ಬಳಿ ಭಕ್ತಿ ಇಂದ  ನಿಂತಿರುವ ಮೂರ್ತಿಇದೆ.ಬನ್ನಿ ರಂಗನ ಪ್ರಾರ್ಥಿಸೋಣ. ಮುದ್ದು ರಂಗನ ದರ್ಶನ ಪಡೆದು ದಕ್ಷಿಣ ದಿಕ್ಕಿಗೆ ಇರುವಬಾಗಿಲ ಮೂಲಕ ಹೊರಗೆಬಂದು  ಹೊರ ಆವರಣ ಕ್ಕೆ ಬರೋಣ ನಂತರ  ಬಲಕ್ಕೆ ತಿರುಗಿ ಚಲಿಸೋಣ ಇಲ್ಲಿ ಬನ್ನಿ ನರಸಿಂಹ , ಸುದರ್ಶನ ಸನ್ನಿಧಿಯಲ್ಲಿ   ದರ್ಶನ ಮಾಡಿ ಮುಂದೆ ಬನ್ನಿ ಉತ್ತರಕ್ಕೆ ಸಾಗೋಣ ನಂತರ  ಸಿಗುವುದು ಗೋಪಾಲ ಕೃಷ್ಣ ಸನ್ನಿಧಿ  ಇಲ್ಲಿ ದರುಶನ ಪಡೆದು ಮುಂದೆ ಹೋದರೆ ಸಿಗುವುದು ರಂಗನಾಯಕಿ ಅಮ್ಮ ನವರ ಸನ್ನಿಧಿ " ತಲಕಾಡು ಮರಳಾಗಲಿ ಮಾಲಂಗಿ   ಮಡು ವಾಗಲಿ   "  ಎಂಬ  ಶಾಪಕ್ಕೂ ಇಲ್ಲಿನ ಸನ್ನಿಧಿ ಗೂ ಸಂಭಂದ ವಿದೆ.ರಂಗನಾಯಕಿ ಅಮ್ಮ ನವರ ದರ್ಶನ ಪಡೆದು ರಂಗನ ಪಾದಕ್ಕೆ ಶರಣಾಗಿ ಪೂರ್ವದ ಕಡೆ ನಡೆದರೆ ಆಳ್ವಾರ ರ ಮೂರ್ತಿಗಳ ದರ್ಶನ ಪಡೆದು ಪೂರ್ವಕ್ಕೆ ಮುಖಮಾಡಿರುವ ವೆಂಕಟೇಶನ ದರ್ಶನ ಪಡೆದು ಇವನ ಎದುರಲ್ಲಿ ನಿಂತಿರುವ ಹನುಮಂತ ದೇವರ ದರ್ಶನ ಪಡೆದು ಪಾವನರಾಗಿ ಹೊರ ಬನ್ನಿ!!! ಅಬ್ಭ ಸುಸ್ತಾಯ್ತಾ !!! ಹೌದು ವಿಶಾಲವಾದ ದೇವಾಲಯ ದರ್ಶನ ಮಾಡುವಾಗ ಇದು ಸಾಮಾನ್ಯ.ಬನ್ನಿ ವಿಶ್ರಮಿಸೋಣ ಶ್ರೀ ರಂಗ ನಾಥ ನಿಗೆ ಸಂಕ್ರಾಂತಿ ಯ ಉತ್ತರಾಯಣ ಪುಣ್ಯದ ಕಾಲದಲ್ಲಿ ನಡೆಯುವ ಲಕ್ಷ ದೀಪೋತ್ಸವ ಹಾಗೂ ರಥ ಸಪ್ತಮಿ ರಥೋತ್ಸವ ವಿಶೇಷ ದಿನಗಳು .ಬನ್ನಿಲಕ್ಷ ದೀಪೋತ್ಸವದ  ಬೆಳಕಿನ ವೈಭವ ನೋಡೋಣ      ಶ್ರೀ ರಂಗ ಪಟ್ಟಣದ  ದ್ವೀಪದಲ್ಲಿ  ಹಣತೆಯ ದೀಪಗಳು  ರಂಗುಚೆಲ್ಲಿ ರಂಗನ ಕೀರ್ತಿ ಬೆಳಗುತ್ತಿವೆ.ಇಲ್ಲಿಗೆ ಶ್ರೀ ರಂಗ ನಾಥ ದೇವಾಲಯ ಪರಿಚಯ ಮುಗಿಯಿತು. ಮುಂದಿನ ಸಂಚಿಕೆಯಲ್ಲಿ ಮತ್ತೊಂದು ಸ್ಮಾರಕ ಪರಿಚಯ ಮಾಡಿಕೊಳ್ಳೋಣ .   ಪರಿಚಯ ಮಾಡಿಕೊಂಡ ನಿಮಗೆ ವಂದನೆಗಳು.