ಭಾನುವಾರ, ಆಗಸ್ಟ್ 12, 2012

ಅವಸಾನದ ಅಂಚಿನಲ್ಲಿ ಶ್ರೀ ರಂಗಪಟ್ಟಣದ ರಾಕೆಟ್ ಕೋರ್ಟು ....!!

ಶ್ರೀ ರಂಗ ಪಟ್ಟಣದ  ರಾಕೇಟು ಗಳ ಚಿತ್ರಣ [ ಚಿತ್ರ ಕೃಪೆ ವಿಕಿಪಿಡಿಯಾ ]
ಶ್ರೀ ರಂಗ ಪಟ್ಟಣದ ರಾಕೆಟ್ ಕೋರ್ಟ್ 
ಶ್ರೀರಂಗಪಟ್ಟಣದ ಇತಿಹಾಸ ಗಮನಿಸಿದರೆ  ವಿಜ್ಞಾನದ  ಇತಿಹಾಸವೂ ಅನಾವರಣ ಗೊಳ್ಳುತ್ತದೆ.  ಅಂದಿನ ದಿನದ ಯುದ್ದಗಳಲ್ಲಿ  ಶ್ರೀರಂಗಪಟ್ಟಣದ ಸೈನಿಕರು  ವೈರಿಗಳ ವಿರುದ್ಧ  ರಾಕೆಟ್ ಬಳಸಿ  ಯುದ್ಧ  ಮಾಡಿ ಸೋಲಿಸಿ  ಹೊಸ ಕ್ರಾಂತಿ ಮಾಡಿದ್ದರು.ಮೈಸೂರಿನ ಇತಿಹಾಸದಲ್ಲಿ  ಅಥವಾ ಭಾರತ ಇತಿಹಾಸದಲ್ಲಿ ಯುದ್ದಗಳಲ್ಲಿ ರಾಕೆಟ್ ತಂತ್ರಜ್ಞಾನ ಬಳಸಿ ಕೊಂದ ಕೀರ್ತಿ ಹೈದರಾಲಿ ಗೆ ಸಲ್ಲುತ್ತದೆ. ಹೌದು ಅವನ ಕಾಲದಲ್ಲಿ ಸುಮಾರು 1200 ಜನರ ಒಂದು ಸಮೂಹ  ಯುದ್ದದಲ್ಲಿ ರಾಕೆಟ್ ಬಳಕೆ ಮಾಡುವ  ತಂತ್ರಗಾರಿಕೆಯ ಪರಿಣಿತಿ ಪಡೆದಿದ್ದು ,  ಟಿಪ್ಪು ಸುಲ್ತಾನ್ ಕಾಲದಲ್ಲಿ  ಈ ಸಮೂಹ 5000 ದಾಟಿತ್ತು . ಯುದ್ದದಲ್ಲಿ  ರಾಕೆಟ್ ಉಪಯೋಗಿಸುವ ಬಗ್ಗೆ ಟಿಪ್ಪೂಕಾಲದಲ್ಲಿ  ಒಂದು ತಾಂತ್ರಿಕ  ಪುಸ್ತಕ  ಬರೆಯಲಾಗಿದ್ದು ಅದನ್ನು " ಫಾತುಲ್  ಮುಜಾಹಿದೀನ್ ."  ಎಂದು ಕರೆಯಲಾಗಿದೆ. ಇವುಗಳನ್ನು ತಯಾರಿಸುತ್ತಿದ್ದ  ಪ್ರದೇಶವನ್ನು "ತಾರ ಮಂಡಲ್  ಪೇಟೆ" ಎಂದೂ ಸಹ ಕರೆಯಲಾಗುತ್ತಿತ್ತು.  ಮೈಸೂರಿನ  ಅಂತಿಮ ಯುದ್ದಾ ನಂತರ  ಗೆದ್ದ ಬ್ರಿಟೀಷರು ಮೈಸೂರು ರಾಕೆಟ್ ಗಳನ್ನೂ ಬ್ರಿಟನ್ ಗೆ ತೆಗೆದು  ಕೊಂಡು  ಹೋಗಿ  ಅದನ್ನು  ಸಂಶೋಧಿಸಿ , ಮತ್ತಷ್ಟು ಅಭಿವೃದ್ಡಿ ಪಡಿಸಿ  ತಾವೂ ಸಹ  ಹಲವಾರು  ಯುದ್ಧಗಳಲ್ಲಿ  ರಾಕೆಟ್  ಉಡಾಯಿಸಿ ವಿಜಯದ ನಗೆ ಬೀರಿದರು. ಇಂದಿಗೂ ಕೂಡ ಶ್ರೀರಂಗಪಟ್ಟಣದ  ರಾಕೆಟ್ ಗಳ ಬಗ್ಗೆ ವಿಶೇಷ ಗೌರವ  ಇದೆ. "ಅಮೇರಿಕಾದ ನಾಸಾ"  , ಬ್ರಿಟೀಷ್  ಡಿಫೆನ್ಸ್ ಅಕಾಡಮಿ,  ಮುಂತಾದೆಡೆ ಶ್ರೀರಂಗಪಟ್ಟಣದ ರಾಕೆಟ್ ಗಳ ಬಗ್ಗೆ  ಸಂಶೊಧನೆ  ನಡೆದಿದೆ . ನಮ್ಮ ದೇಶದ ನೆಚ್ಚಿನ  ಮಾಜಿ ರಾಷ್ಟ್ರಪತಿ  ಶ್ರೀ ಅಬ್ದುಲ್ ಕಲಾಮ್  ರವರೂ ಸಹ  ತಮ್ಮ "wings of  fire" ಪುಸ್ತಕದಲ್ಲಿ  ಶ್ರೀರಂಗಪಟ್ಟಣದ ರಾಕೆಟ್ ಗಳ ಬಗ್ಗೆ ಉಲ್ಲೇಖಿಸಿದ್ದಾರೆ . 
ಕಸದ  ಮಡಿಲಲ್ಲಿ  ರಾಕೆಟ್ ಕೋರ್ಟ್ 

ವಿಶ್ವ ರಾಕೆಟ್ ತಂತ್ರಜ್ಞಾನದ ಇತಿಹಾಸದಲ್ಲಿ  ಶ್ರೀರಂಗಪಟ್ಟಣದ  ರಾಕೆಟ್ ಗಳ  ಉಲ್ಲೇಖ ಇಲ್ಲದಿದ್ದರೆ  ಆ ಇತಿಹಾಸ ಅಪೂರ್ಣವೆಂದೆ ಅರ್ಥ  .  ಇಷ್ಟೆಲ್ಲಾ  ಕೀರ್ತಿ  ಕಿರೀಟ  ಹೊಂದಿದ್ದ  ಶ್ರೀರಂಗಪಟ್ಟಣ ದ ರಾಕೆಟ್ ಗಳಿಗೆ ಸಂಬಂದಿಸಿದ  ಒಂದು ಜಾಗ  "ರಾಕೆಟ್ ಕೋರ್ಟ್"  ತನ್ನ ಅವಸಾನ   ಹೊಂದುತ್ತಾ  ಮರಣ ಶಯ್ಯೆ ಯಲ್ಲಿದೆ. ಹೌದು  ಈ ಜಾಗದಲ್ಲಿ ರಾಕೆಟ್  ಉಡಾವಣೆ ಮಾಡುತ್ತಿದ್ದರೋ ಅಥವಾ  ತಯಾರು ಮಾಡುತ್ತಿದ್ದರೋ, ತಿಳಿಯದು  ಆದರೆ  ರಾಕೆಟ್ ಕೋರ್ಟ್ ಎಂದು ಇಂದಿಗೂ  ಇತಿಹಾಸ ತಿಳಿದಿರುವ  ಹಲವರು ಇದನ್ನು ಗುರುತಿಸುತ್ತಾರೆ.
ರಾಕೆಟ್ ಕೋರ್ಟ್ ಒಳನೋಟ  ಹಿಂದಿನದು 
ರಾಕೆಟ್ ಕೋರ್ಟ್  ಒಳ ನೋಟ ಇಂದು  
ಇಂದು ಈ ರಾಕೆಟ್ ಕೋರ್ಟ್  ಜನರ ಮನಸಿನಿಂದ  ಮರೆಯಾಗಿದ್ದು, ಕಸದ ಲೋಕದಲ್ಲಿ  ಲೀನವಾಗುತ್ತಾ  , ಮನುಷ್ಯರ ಮಲದಿಂದ  ಅಲಂಕಾರ ಗೊಂಡು  ಮರಣ  ಶೈಯ್ಯೆ  ಯಲ್ಲಿದೆ.   ಬ್ರಿಟೀಷರು ಇದನ್ನು   " garison  ball  alley "   ಎಂದೂ ಸಹ ಕರೆದಿದ್ದಾರೆ. ಬಹುಷಃ  ಬ್ರಿಟೀಷರು  ಈ ಪ್ರದೇಶದಲ್ಲಿ ಚೆಂಡಿಗೆ ಸಂಬಂದಿಸಿದ  ಯಾವುದೋ ಆಟಕ್ಕೆ ಉಪಯೋಗಿಸಿರುವ ಸಾಧ್ಯತೆ ಇದೆ  80 ಅಡಿ ಉದ್ದಾ 40 ಅಡಿ ಅಗಲ , ಹಾಗು 35  ಅಡಿ ಎತ್ತರದ ಗೋಡೆ ಗಳನ್ನೂ  ಇಂದು ಕಾಣಬಹುದಾಗಿದೆ.  ಇದರ ದುಸ್ತಿತಿ ಬಗ್ಗೆ    ಯಾರಿಗೂ ಯೋಚನೆಯಿಲ್ಲದೆ   ಪ್ರವಾಸಿಗಳೂ ಹೋಗಲಾರದ  ಹಂತಕ್ಕೆ ಈ ಸ್ಮಾರಕ  ತಲುಪಿದೆ. ಸುತ್ತಲೂ  ಮನೆಗಳಿದ್ದು  ಒಂದು ಓಣಿ ಮಾತ್ರ  ಇಲ್ಲಿಗೆ ತಲುಪಲು  ಇದೆ.  ಇತಿಹಾಸದ ಮಹತ್ವದ  ಕುರುಹನ್ನು  ಅಳಿಸಿಹಾಕುತ್ತಾ  ಮಹಾನ್  ಭಾರತೀಯರಾಗಿ  ಮೆರೆಯುತ್ತಿದ್ದೇವೆ.   ಮುಂದೊಮ್ಮೆ ಇತಿಹಾಸವನ್ನು ದುರ್ಬೀನ್ ಹಾಕಿ ಹುಡುಕ ಬೇಕಾಗುತ್ತದೆ ಅಲ್ವೇ ??