ಸೋಮವಾರ, ಆಗಸ್ಟ್ 8, 2011

ಈ ದ್ವೀಪದಲ್ಲಿ ಹರಿಯಜೋತೆಗೆ ಹರನೂ ಇದ್ದಾನೆ !!!!! ಐತಿಹಾಸಿಕ ಗಂಗಾಧರೇಶ್ವರ ದೇವಾಲಯ ನೋಡೋಣ ಬನ್ನಿ !!!


ಶ್ರೀ ಗಂಗಾಧರೇಶ್ವರ ದೇವಾಲಯ.
ಕಳೆದ ಸಂಚಿಕೆಯಲ್ಲಿ ಲಾಲ್ ಮಹಲ್ ಅರಮನೆಯ ಬಗ್ಗೆ ತಿಳಿದು ಕೊಂಡಿರಿ.ಅದಕ್ಕೆ ಹೊಂದಿಕೊಂಡಂತೆ ಪೂರ್ವ ದಿಕ್ಕಿಗೆ ಮುಖಮಾಡಿರುವ ಒಂದು ದೇವಾಲಯ ನೀವು ನೋಡಬಹುದು. ಅದೇ ಗಂಗಾಧರೇಶ್ವರ ದೇವಾಲಯ.ಹೌದು ಈ ಸುಂದರ ದ್ವೀಪದಲ್ಲಿ ಹರಿಯ ಜೊತೆಗೆ ಹರನೂ ನೆಲೆಸಿದ್ದಾನೆ. ಈ ದೇವಾಲಯದ ಬಗ್ಗೆ  ಬೆಂಗಳೂರಿನ ಖ್ಯಾತ ಪತ್ರಕರ್ತರಾದ ಶ್ರೀ ರಿಗ್ರೆಟ್ ಐಯ್ಯರ್ ಅವರು ಸಂಕ್ಷಿಪ್ತವಾಗಿ ಹಾಗು ಸುಂದರವಾಗಿ ಮಾಹಿತಿ ಕೈಪಿಡಿ ತಯಾರಿಸಿ  ಉಚಿತವಾಗಿ ಪ್ರಕಟಣೆ ಮಾಡಿದ್ದಾರೆ. ಬನ್ನಿ ಒಂದಷ್ಟು ಮಾಹಿತಿ ತಿಳಿಯೋಣ.ಶ್ರೀರಂಗ ಪಟ್ಟಣದ ಕೋಟೆ ಕಟ್ಟುವ ಮುನ್ನ  ಲಿಂಗದ ಮೇಲೆ ಕಾವೇರಿ ಹರಿದು ಹೋಗುತ್ತಿದ್ದ ಕಾರಣ , ಹಾಗು ಶಿವಲಿಂಗ ಕಾವೇರಿ ನದಿಯ ಮಧ್ಯಭಾಗದಲ್ಲಿ ಇದ್ದಕಾರಣ  ಅಂದಿನ ನಾಗರೀಕರು  ನಡುಹೊಳೆ  ಗಂಗಾಧರ " ಎಂಬ ಹೆಸರನ್ನು ಕರೆಯುತ್ತಿದ್ದರು ,ಲಿಂಗದ ಮೇಲೆ ಎಲ್ಲೆಡೆಯಲ್ಲೂ  ಶಿಲೆಯಲ್ಲಿ ಕೂದಲು  ಜಡೆ ರೀತಿಯಲ್ಲಿ  ಮೂಡಿರುವ ಕಾರಣ" ಜಡೆ ಗಂಗಾಧರೇಶ್ವರ" ಅಂತಾನೂ ಕರೆಯಲಾಗುತ್ತಿದೆ. ದ್ವೀಪದಲ್ಲಿ  ನೆಲೆಸಿದ್ದ "ಗೌತಮ ಋಷಿಗಳು " ಚೈತ್ರಮಾಸದ ಚಿತ್ರಾ ಪೂರ್ಣಿಮೆಯಂದು  ಗಂಗಾಧರೆಶ್ವರನನ್ನು  ಪೂಜಿಸಿದ ಕಾರಣ ಇಂದಿಗೂ ಅದೇ ಚಿತ್ರಾ ಪೂರ್ಣಿಮೆಯಂದು  ಈ ದೇವಾಲಯದಲ್ಲಿ  ಬ್ರಹ್ಮ ರಥೋತ್ಸವ ಜರುಗುತ್ತದೆ.                                                       
ಐತಿಹಾಸಿಕ ಹಿನ್ನೆಲೆ :- ಈ ದೇವಾಲಯ ನಿರ್ಮಾಣ ಯಾವಾಗ ಆಯಿತೆಂಬ ಬಗ್ಗೆ ಹೆಚ್ಚು ಮಾಹಿತಿ ಇಲ್ಲದ ಕಾರಣ ಸ್ಪಷ್ಟವಾದ ಇತಿಹಾಸ ತಿಳಿದುಬರುವುದಿಲ್ಲ.
ದೇವಾಲಯದ ಒಳ ಆವರಣ.
ವಿಜಯನಗರ ಅರಸರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂತೆಂದು ಹಲವರು ಅಭಿಪ್ರಾಯ ಪಡುತ್ತಾರೆ.ಕ್ರಿ.ಶ .1517 ರ ಫೆಬ್ರವರಿ 19  ರಂದು ಮಹಾಶಿವರಾತ್ರಿಯ ದಿನ ಶ್ರೀ ರಂಗ ಪಟ್ಟಣದಲ್ಲಿ  ಸಾಳುವ ವಂಶದ ಗಜಸಿಂಹನು ದೇವಾಲಯಕ್ಕೆ ಬರುವ ಭಕ್ತರಿಗೆ ಪ್ರಸಾದ ನೀಡಲು  ಸಮೀಪದ ಹಳ್ಳಿಗಳಿಂದ  ಜಮೀನು  ಖರೀದಿಸಿ  ಅದನ್ನು ಗಂಗಾಧರೇಶ್ವರ  ಸ್ವಾಮಿಗೆ ಸಮರ್ಪಿಸಿದರೆಂದು ಶಾಸನಗಳು ತಿಳಿಸುತ್ತವೆ.
ದೇವಾಲಯದ ಒಳಗಡೆ ಕಲ್ಲಿನ  ಸುಂದರ ಕಲ್ಲಿನ ಕಂಬಗಳು

ನಂತರ ಯದುವಂಶದ ಅರಸರಾದ ಶ್ರೀ ರಣಧೀರ ಕಂಟೀರವ   ನರಸಿಂಹರಾಜ ವೊಡೆಯರ್  ರವರು ವಯಸ್ಸಾದ ತಮ್ಮ ತಾಯಿಯವರು    ತಲಕಾಡಿನ ಪಂಚಲಿಂಗ ದರ್ಶನಕ್ಕೆ ಹೋಗಲು ಆಗದ ಕಾರಣ ಈ ದೇವಾಲಯದಲ್ಲಿ ಐದು ಲಿಂಗಗಳನ್ನು ಪ್ರತಿಷ್ಟಾಪಿಸಿ  ಪೂಜೆ ಸಲ್ಲಿಸಿರುತ್ತಾರೆ.ಹಾಗು ಕಳಲೆ ನಂಜರಾಜಯ್ಯನು  ಬೃಹತ್ ಆದ ಲೋಹದ ಉತ್ಸವ ದಕ್ಷಿಣಾ ಮೂರ್ತಿಯನ್ನು  ಸೇವಾರ್ಥವಾಗಿ ಮಾಡಿಸಿ ಕೊಟ್ಟಿರುತ್ತಾರೆ.ಹೀಗೆ ಹಲವಾರು  ಭಕ್ತರ ಸೇವೆಯಿಂದ ಈ ದೇವಾಲಯ ಪ್ರವರ್ಧಮಾನಕ್ಕೆ ಬಂದಿದೆ. ಗರ್ಭಗುಡಿ, ಸುಖನಾಸಿನಿ, ನವರಂಗ , ಪಾತಾಳ ವಿಮಾನ ಗೋಪುರ, ಇವುಗಳಿಂದ ಅಲಂಕೃತವಾಗಿ ಬೃಹತ್ತಾಗಿ ನಿರ್ಮಾಣಗೊಂಡ ಈ ದೇವಾಲಯ ದೊಡ್ಡ ಕಂಬಗಳನ್ನು , ಚಪ್ಪಡಿ ಹಾಸುಗಳನ್ನು ಹೊಂದಿ , ಮೆರೆದಿದೆ. ಪ್ರಕಾರದಲ್ಲಿ ಶಿಲ್ಪಿ ಶಾಸ್ತ್ರಕ್ಕೆ ಅನುಗುಣವಾಗಿ       ದಕ್ಷಿಣಾ ಮೂರ್ತಿ, ವೀರಭದ್ರ ,ಭದ್ರಕಾಳಿ,ಷಣ್ಮುಖ,ಮಹಾಗಣಪತಿ,ಮಹಿಷಾಸುರ ಮರ್ಧಿನಿ ,ಪ್ರಸನ್ನ ಪಾರ್ವತಿ,ಸಪ್ತ ಮಾತೃಕೆಯರು,ಸುಬ್ರಹ್ಮಣ್ಯ, ಸೂರ್ಯ, ಚಂದ್ರ, ಚಂಡಿಕೇಶ್ವರ, ಹಂಸ ಗಾಯತ್ರಿ, ಕಾಲಭೈರವ , ಗೋಪಾಲ ಕೃಷ್ಣ, ವರದರಾಜ ಸ್ವಾಮೀ, ಹಾಗು ಶೈವ ಸಂತರ ಮೂರ್ತಿಗಳನ್ನು ಇಲ್ಲಿ ಕಾಣಬಹುದು.ದೇವಾಲಯದ ಗೋಪುರವು ಚೋಳರ ಶೈಲಿಯನ್ನು ಹೊಂದಿದ್ದು,ಉತ್ಸವಮೂರ್ತಿ ಎರಡೂ ಬದಿಯಲ್ಲಿ ಅಮ್ಮನವರು ಇರುವುದು ವಿಶೇಷವಾಗಿದೆ.ಮೈಸೂರಿನ ಅರಸರ ಮೆಚ್ಚಿನ ದೇವಾಲಯವಾಗಿ ಅಂದಿನ ಗತ ಇತಿಹಾಸದ ನೆನಪುಗಳನ್ನು ಹೊತ್ತು ನಿಂತ ಈ ದೇವಾಲಯಕ್ಕೆ ನೀವೂ ಒಮ್ಮೆ ಬನ್ನಿ , ಗಂಗಾಧರೇಶ್ವರನ ಕೃಪೆಗೆ  ಪಾತ್ರರಾಗಿ.!!!       
ಉತವ ಮೂರ್ತಿ
ನಕ್ಷತ್ರಾಕಾರದ ಕಲ್ಲಿನ ಮೇಲೆ ಸ್ಥಾಪಿತವಾದ  ನಂದಿ  
    
ಮತ್ತೊಂದು ಕೌತುಕವೆಂದರೆ ಟಿಪ್ಪೂ ಸುಲ್ತಾನನ ಅವಧಿಯಲ್ಲೂ  ಟಿಪ್ಪೂ ಸುಲ್ತಾನನ ಅರಮನೆಯ  ಜಾಗಕ್ಕೆ ಹೊಂದಿಕೊಂಡಂತೆ  ಈ ದೇವಾಲಯ ಅಸ್ತಿತ್ವ ದಲ್ಲಿದ್ದು  , ಯಾವುದೇ ಅಡೆ ತಡೆ ಇಲ್ಲದೆ ಪೂಜಾ ಕೈಂಕರ್ಯಗಳು ಜರುಗುತ್ತಿದ್ದವಂತೆ. ಅನೇಕ  ಐತಿಹಾಸಿಕ ವಿಸ್ಮಯಗಳನ್ನೂ ಕಂಡಿರುವ ಈ ದೇವಾಲಯ , ಗುಟ್ಟುಬಿಟ್ಟು ಕೊಡದೆ  ಐತಿಹಾಸಿಕ ಮಹತ್ವ ಸಾರುತ್ತಾ ನಿಂತಿದೆ.!!!

2 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

ಉಪಯುಕ್ತ ಅಪರೂಪದ ಮಾಹಿತಿ

PARAANJAPE K.N. ಹೇಳಿದರು...

ಬಹುತೇಕ ಜನರ ಅರಿವಿಗೆ ಬಾರದೇ ಉಳಿದ ಐತಿಹಾಸಿಕ ಸ್ಥಳಗಳ ಐತಿಹ್ಯದ ಜೊತೆಗೆ ಸುತ್ತಲ ಪರಿಸರದ ಬಗ್ಗೆ ಸ೦ಶೋಧನಾತ್ಮಕ ನೆಲೆಯಲ್ಲಿ ಬರೆಯುತ್ತಿದ್ದೀರಿ, ಚೆನ್ನಾಗಿದೆ, ಮುಂದುವರಿಸಿ.