1779 ರ ಮೇ 04 ರಂದು ಬ್ರಿಟೀಷರು ಶ್ರೀ ರಂಗ ಪಟ್ಟಣ ಕ್ಕೆ ಮುತ್ತಿಗೆ ಹಾಕಿ ಕೋಟೆಗೆ ಲಗ್ಗೆ ಇಟ್ಟ ದಿನ . ಯಾರಿಗೂ ಜಗ್ಗದ ಶ್ರೀ ರಂಗ ಪಟ್ಟಣದ ಅಭೇದ್ಯ ಕೋಟೆ ಅಂದು ಮಧ್ಯಾಹ್ನ 1 -00 ಘಂಟೆ ವೇಳೆಗೆ ಬ್ರಿಟೀಷರ ತೂಫಾನಿಗೆ ಬಲಿಯಾಗಿತ್ತು.ನಂತರ ನಡೆದದ್ದು ಬ್ರಿಟೀಷರ ಗೆಲುವು " ಟಿಪ್ಪೂ ಸುಲ್ತಾನ್" ಶರಣಾಗದೆ ಯುದ್ದದಲ್ಲಿ ಮರಣಹೊಂದಿದ್ದು ಇತಿಹಾಸ ಎಲ್ಲರಿಗೂ ತಿಳಿದಿದೆ.
ಶ್ರೀ ರಂಗಪಟ್ಟಣ ವನ್ನು ಪ್ರವೇಶಿಸಲು ಬ್ರಿಟೀಷರು ಮೊದಲು ಕೋಟೆ ಓಡೆದ ಸ್ಥಳ . |
ಅಂದಿನ ಯುದ್ದದ ಗೆಲುವಿನ ಸ್ಮರಣಾರ್ಥ ಮೈಸೂರು ಸರ್ಕಾರವು ಯುದ್ದ ಸ್ಮಾರಕ ನಿರ್ಮಿಸಿದೆ .ಶ್ರೀ ರಂಗ ಪಟ್ಟಣದ ದ್ವೀಪದ ಪಶ್ಚಿಮ ಕೋಟೆ ತುದಿಯಲ್ಲಿರುವ ಈ ಜಾಗ ದಲ್ಲಿ ಕಾವೇರಿ ನದಿಯು ಎರಡು ಸೀಳಾಗಿ ಒಡೆದು ಶ್ರೀ ರಂಗ ಪಟ್ಟಣವನ್ನು ತಬ್ಬಿಕೊಂಡು ಹರಿದು ಸಂಗಮದಲ್ಲಿ ಎರಡೂ ಸೀಳು ಗಳನ್ನೂ ಮತ್ತೆ ಸೇರಿಸಿಕೊಂಡು ಸಾಗುತ್ತಾಳೆ.ಈ ಯುದ್ದ ಸ್ಮಾರಕದಲ್ಲಿ ಕೆಳಗಡೆ ವೃತ್ತಾಕಾರದಲ್ಲಿ ಕಲ್ಲಿನ ಅಡಿಪಾಯ ಹಾಕಿ ಅದರಮೇಲೆ ವಿಶಿಷ್ಟ ಆಕಾರದಲ್ಲಿ ಕಲ್ಲಿನ ಕೆತ್ತನೆ ಮಾಡಿ ಗ್ರಾನೈಟ್ ಕಲ್ಲಿನ ಫಲಕಗಳನ್ನು ನಾಲ್ಕೂ ಕಡೆ ಪ್ರದರ್ಶಿಸಲಾಗಿದೆ.ಫಲಕದ ಕಲ್ಲಿನ ಮೇಲೆ ನಾಲ್ಕೂ ಕಡೆ ಕಲ್ಲಿನ ಗುಂಡುಗಳನ್ನು ಅಲಂಕಾರಕ್ಕೆ ಇಟ್ಟು[ ಈ ಕಲ್ಲಿನ ಗುಂಡುಗಳನ್ನು ಅಂದಿನ ಯುದ್ದಗಳಲ್ಲಿ ಬಳಸುತ್ತಿದ್ದ ನೆನಪಿಗೆ ]ಅದರಮೇಲೆ ನುಣುಪು ಕಲ್ಲಿನ ಗೋಪುರ ವಿದ್ದು ನೋಡಲು ಸುಂದರವಾಗಿದೆ. ಒಂದು ಶತಮಾನ ಪೂರೈಸಿರುವ ಈ ಸ್ಮಾರಕ ಬಹಳಷ್ಟು ಹವಾಮಾನ ವೈಪರೀತ್ಯ ಅನುಭವಿಸಿ ಇಂದಿಗೂ ಇತಿಹಾಸ ಸಾರುತ್ತಾ ನಿಂತಿದೆ.ಬನ್ನಿ ಪರಿಚಯ ಮಾಡಿಕೊಳ್ಳೋಣ. ಮೊದಲ ಪಾರ್ಶ್ವದಲ್ಲಿ ಈ ಸ್ಮಾರಕ ನಿರ್ಮಿಸಿದ ಉದ್ದೇಶ ತಿಳಿಸಲಾಗಿದ್ದು ಅದನ್ನು 1907 ರಲ್ಲಿ ಅಂದಿನ ಮೈಸೂರು ಸರ್ಕಾರ ನಿರ್ಮಿಸಿದೆ.
ಬನ್ನಿ ಸ್ಮಾರಕದ ಮೊದಲ ಪಾರ್ಶ್ವವನ್ನು ನೋಡೋಣ ಅಲ್ಲಿ ಈ ಸ್ಮಾರಕ ನಿರ್ಮಿಸಿದ ಬಗ್ಗೆ ಮಾಹಿತಿ ಇದೆ. ಇದನ್ನು ನಿರ್ಮಿಸಿದ ಕಾರಣವನ್ನು ವಿವರಿಸಲಾಗಿದೆ.
ಎರಡನೇ ಹಾಗು ಮೂರನೇ ಪಾರ್ಶ್ವದಲ್ಲಿ ಶ್ರೀರಂಗ ಪಟ್ಟಣದ ಅಂತಿಮ ಕದನದಲ್ಲಿ ಭಾಗವಹಿಸಿದ ಹಲವಾರು ದೇಶೀ /ವಿದೇಶಿಸೈನಿಕ ತುಕಡಿಗಳ ಹೆಸರನ್ನುನಮೂದಿಸಲಾಗಿದೆ.ಇದರಲ್ಲಿ ಹೆಸರಿಸಲಾಗಿರುವ ಹಲವಾರು ತುಕಡಿಗಳು ಇಂದಿಗೂ ಭಾರತೀಯ ಸೈನ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ !!! ಬನ್ನಿ ಮತ್ತೊಂದು ಪಾರ್ಶ್ವ ನೋಟಕ್ಕೆ ಇಲ್ಲಿ ಕದನದಲ್ಲಿ ಮಡಿದ ಹಾಗು ಗಾಯಗೊಂಡ ಯೂರೋಪಿಯನ್ ಅಧಿಕಾರಿಗಳ ಹೆಸರನ್ನು ಕೆತ್ತಲಾಗಿದೆ. ಈ ಪ್ರದೇಶವು ಶ್ರೀ ರಂಗಪಟ್ಟಣ ದ್ವೀಪದ ಪಶ್ಚಿಮ ಭಾಗಕ್ಕಿದ್ದು ಒಳ್ಳೆಯ ಸೂರ್ಯಾಸ್ತ ವೀಕ್ಷಣೆಗೆ ಅನುಕೂಲಕರವಾಗಿದೆ. ಮತ್ತೊಂದು ವಿಶೇಷ ಅಂದ್ರೆ ದ್ವೀಪದ ಎರಡೂ ಭಾಗದಲ್ಲಿ ಹರಿವ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮೇಲೆ ಬೆಂಗಳೂರು ಮೈಸೂರು ರೈಲುಗಳು ಸಂಚರಿಸುವ ನೋಟ ಚೆನ್ನಾಗಿರುತ್ತದೆ. ಮುಂದೊಮ್ಮೆ ಇಲ್ಲಿಗೆ ಬಂದು ಹೋಗಿ .ಈ ಸ್ಮಾರಕ ಸಂತಸ ಪಡುತ್ತದೆ.