ಶುಕ್ರವಾರ, ಡಿಸೆಂಬರ್ 31, 2010

ಕನ್ನಡ ನಾಡಿನ ಈ ಸಣ್ಣ ದ್ವೀಪ ಹಿಡಿಯಲು ಅಂದು ಮಹಾ!! ಮಹಾ!! ಸೈನ್ಯ ಬಂದಿತ್ತು !! ಇಲ್ಲಿದೆ ಪುರಾವೆ !!!



1779 ರ ಮೇ 04   ರಂದು ಬ್ರಿಟೀಷರು   ಶ್ರೀ ರಂಗ ಪಟ್ಟಣ ಕ್ಕೆ ಮುತ್ತಿಗೆ ಹಾಕಿ  ಕೋಟೆಗೆ ಲಗ್ಗೆ ಇಟ್ಟ ದಿನ . ಯಾರಿಗೂ ಜಗ್ಗದ ಶ್ರೀ ರಂಗ ಪಟ್ಟಣದ  ಅಭೇದ್ಯ ಕೋಟೆ ಅಂದು ಮಧ್ಯಾಹ್ನ 1 -00  ಘಂಟೆ ವೇಳೆಗೆ ಬ್ರಿಟೀಷರ ತೂಫಾನಿಗೆ ಬಲಿಯಾಗಿತ್ತು.ನಂತರ ನಡೆದದ್ದು ಬ್ರಿಟೀಷರ ಗೆಲುವು " ಟಿಪ್ಪೂ ಸುಲ್ತಾನ್" ಶರಣಾಗದೆ ಯುದ್ದದಲ್ಲಿ  ಮರಣಹೊಂದಿದ್ದು ಇತಿಹಾಸ ಎಲ್ಲರಿಗೂ ತಿಳಿದಿದೆ. 



ಶ್ರೀ ರಂಗಪಟ್ಟಣ ವನ್ನು ಪ್ರವೇಶಿಸಲು ಬ್ರಿಟೀಷರು ಮೊದಲು ಕೋಟೆ ಓಡೆದ ಸ್ಥಳ .


ಅಂದಿನ ಯುದ್ದದ ಗೆಲುವಿನ  ಸ್ಮರಣಾರ್ಥ ಮೈಸೂರು ಸರ್ಕಾರವು ಯುದ್ದ ಸ್ಮಾರಕ ನಿರ್ಮಿಸಿದೆ .ಶ್ರೀ ರಂಗ ಪಟ್ಟಣದ ದ್ವೀಪದ ಪಶ್ಚಿಮ ಕೋಟೆ  ತುದಿಯಲ್ಲಿರುವ ಈ ಜಾಗ ದಲ್ಲಿ ಕಾವೇರಿ  ನದಿಯು ಎರಡು ಸೀಳಾಗಿ ಒಡೆದು ಶ್ರೀ ರಂಗ ಪಟ್ಟಣವನ್ನು ತಬ್ಬಿಕೊಂಡು ಹರಿದು  ಸಂಗಮದಲ್ಲಿ ಎರಡೂ ಸೀಳು ಗಳನ್ನೂ  ಮತ್ತೆ ಸೇರಿಸಿಕೊಂಡು ಸಾಗುತ್ತಾಳೆ.ಈ ಯುದ್ದ ಸ್ಮಾರಕದಲ್ಲಿ ಕೆಳಗಡೆ  ವೃತ್ತಾಕಾರದಲ್ಲಿ ಕಲ್ಲಿನ ಅಡಿಪಾಯ ಹಾಕಿ ಅದರಮೇಲೆ ವಿಶಿಷ್ಟ ಆಕಾರದಲ್ಲಿ  ಕಲ್ಲಿನ ಕೆತ್ತನೆ ಮಾಡಿ ಗ್ರಾನೈಟ್ ಕಲ್ಲಿನ ಫಲಕಗಳನ್ನು ನಾಲ್ಕೂ ಕಡೆ ಪ್ರದರ್ಶಿಸಲಾಗಿದೆ.ಫಲಕದ ಕಲ್ಲಿನ ಮೇಲೆ  ನಾಲ್ಕೂ ಕಡೆ ಕಲ್ಲಿನ ಗುಂಡುಗಳನ್ನು ಅಲಂಕಾರಕ್ಕೆ ಇಟ್ಟು[ ಈ ಕಲ್ಲಿನ ಗುಂಡುಗಳನ್ನು ಅಂದಿನ ಯುದ್ದಗಳಲ್ಲಿ ಬಳಸುತ್ತಿದ್ದ ನೆನಪಿಗೆ ]ಅದರಮೇಲೆ ನುಣುಪು ಕಲ್ಲಿನ  ಗೋಪುರ ವಿದ್ದು ನೋಡಲು ಸುಂದರವಾಗಿದೆ. ಒಂದು ಶತಮಾನ   ಪೂರೈಸಿರುವ ಈ ಸ್ಮಾರಕ ಬಹಳಷ್ಟು ಹವಾಮಾನ ವೈಪರೀತ್ಯ ಅನುಭವಿಸಿ ಇಂದಿಗೂ ಇತಿಹಾಸ ಸಾರುತ್ತಾ ನಿಂತಿದೆ.ಬನ್ನಿ ಪರಿಚಯ ಮಾಡಿಕೊಳ್ಳೋಣ.   ಮೊದಲ ಪಾರ್ಶ್ವದಲ್ಲಿ ಈ ಸ್ಮಾರಕ ನಿರ್ಮಿಸಿದ ಉದ್ದೇಶ ತಿಳಿಸಲಾಗಿದ್ದು ಅದನ್ನು  1907  ರಲ್ಲಿ ಅಂದಿನ ಮೈಸೂರು ಸರ್ಕಾರ ನಿರ್ಮಿಸಿದೆ.                                   

                                                                                                                                                                                                                 
ಬನ್ನಿ ಸ್ಮಾರಕದ ಮೊದಲ ಪಾರ್ಶ್ವವನ್ನು ನೋಡೋಣ  ಅಲ್ಲಿ ಈ ಸ್ಮಾರಕ ನಿರ್ಮಿಸಿದ ಬಗ್ಗೆ ಮಾಹಿತಿ ಇದೆ. ಇದನ್ನು ನಿರ್ಮಿಸಿದ ಕಾರಣವನ್ನು ವಿವರಿಸಲಾಗಿದೆ.
 ಎರಡನೇ ಹಾಗು ಮೂರನೇ  ಪಾರ್ಶ್ವದಲ್ಲಿ ಶ್ರೀರಂಗ ಪಟ್ಟಣದ ಅಂತಿಮ ಕದನದಲ್ಲಿ  ಭಾಗವಹಿಸಿದ ಹಲವಾರು ದೇಶೀ /ವಿದೇಶಿಸೈನಿಕ ತುಕಡಿಗಳ  ಹೆಸರನ್ನುನಮೂದಿಸಲಾಗಿದೆ.ಇದರಲ್ಲಿ ಹೆಸರಿಸಲಾಗಿರುವ  ಹಲವಾರು ತುಕಡಿಗಳು ಇಂದಿಗೂ ಭಾರತೀಯ ಸೈನ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ !!! ಬನ್ನಿ ಮತ್ತೊಂದು ಪಾರ್ಶ್ವ ನೋಟಕ್ಕೆ   ಇಲ್ಲಿ ಕದನದಲ್ಲಿ ಮಡಿದ ಹಾಗು ಗಾಯಗೊಂಡ ಯೂರೋಪಿಯನ್  ಅಧಿಕಾರಿಗಳ ಹೆಸರನ್ನು ಕೆತ್ತಲಾಗಿದೆ. ಈ ಪ್ರದೇಶವು  ಶ್ರೀ ರಂಗಪಟ್ಟಣ ದ್ವೀಪದ ಪಶ್ಚಿಮ ಭಾಗಕ್ಕಿದ್ದು ಒಳ್ಳೆಯ ಸೂರ್ಯಾಸ್ತ ವೀಕ್ಷಣೆಗೆ ಅನುಕೂಲಕರವಾಗಿದೆ.  ಮತ್ತೊಂದು ವಿಶೇಷ ಅಂದ್ರೆ  ದ್ವೀಪದ ಎರಡೂ ಭಾಗದಲ್ಲಿ ಹರಿವ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮೇಲೆ  ಬೆಂಗಳೂರು ಮೈಸೂರು ರೈಲುಗಳು ಸಂಚರಿಸುವ ನೋಟ ಚೆನ್ನಾಗಿರುತ್ತದೆ. ಮುಂದೊಮ್ಮೆ ಇಲ್ಲಿಗೆ ಬಂದು ಹೋಗಿ .ಈ ಸ್ಮಾರಕ ಸಂತಸ ಪಡುತ್ತದೆ.



ಬುಧವಾರ, ಡಿಸೆಂಬರ್ 8, 2010

ಶ್ರೀ ರಂಗಪಟ್ಟಣದ ನಿಗೂಢ ಸ್ಮಾರಕ !! ನಮ್ಮನ್ನು ಕ್ಷಮಿಸಿಬಿಡಿ ಮಹಾರಾಣಿ!!

ಶ್ರೀ ರಂಗಪಟ್ಟಣ ದ ಪಶ್ಚಿಮವಾಹಿನಿ ರೈಲ್ವೆ ಗೇಟ್ ಹತ್ತಿರ ಕಣ್ಣಿಗೆ ಬಿದ್ದ ಈ ಸ್ಮಾರಕ ಕಣ್ಸೆಳೆಯಿತು!ಹತ್ತಿರ ಹೋದಾಗ ಇದು ಕಳಚಿದ ಇತಿಹಾಸದ ಒಂದು ಹರಿದ ಪುಟವಾಗಿ ಕಂಡಿತು.
                                                                                                                               ಇದೇನಿದು ಒಗಟು ಅಂತಿರ !ಬನ್ನಿ ಹತ್ತಿರ ಹೋಗೋಣ!ನೋಡಿ ಇಲ್ಲಿಯ ಸ್ಥಿತಿ! ಇದು ಮೈಸೂರು ಒಡೆಯರ ವಂಶದ ೧೭೭೬-೧೭೯೬ ಅವದಿಯ ಖಾಸಾ ಚಾಮರಾಜ ಒಡೆಯರ್ VIII ಅವರ ಪತ್ನಿ ಮಹಾರಾಣಿ ಕೆಂಪ ನಂಜಮ್ಮಣಿ ಅವರ ಸಮಾಧಿ ಯಾಗಿದೆ.
ಹತ್ತಿರದಲ್ಲೆ ಪೀಠ ದಲ್ಲಿ ಕನ್ನಡ ಹಾಗು ಇಂಗ್ಲಿಷ್ ನಲ್ಲಿ ಶಾಸನ ಬರೆದಿದ್ದು ವಿರೂಪಗೊಂಡಿವೆ!ಈಗ ಸ್ಮಾರಕ ಇರುವ ಪರಿಸ್ಥಿತಿಯನ್ನು ಚಿತ್ರಗಳಲ್ಲಿ ಮುಂದಿಟ್ಟಿದ್ದೇನೆ.ಪ್ರಪಂಚದ ಇತಿಹಾಸ ತಿಳಿಯಲು ಹಾತೊರೆಯುವ ನಾವು ನಮ್ಮ ಇತಿಹಾಸದ ಪುಟಗಳನ್ನು ಹರಿದು ಹಾಕುತ್ತಿರುವುದು ಯಾವ ನ್ಯಾಯ?ದಯಮಾಡಿ ನಮ್ಮನ್ನು ಕ್ಷಮಿಸಿಬಿಡಿ ಮಹಾರಾಣಿ ಯವರೇ ಎಂದು ಹೇಳಿ, ಹಾಗೆ ಇತಿಹಾಸ ಹೊಸಕಿಹಾಕಿ ನಮ್ಮ ಪಾಡಿಗೆ ನಾವು ಸುಮ್ಮನಿರೋಣ ಬನ್ನಿ !ಏನಂತಿರ ನೀವು?

ಶನಿವಾರ, ಡಿಸೆಂಬರ್ 4, 2010

ಹಸಿರಿನಲ್ಲಿ ಕಳೆದು ಹೋದಶ್ರೀರಂಗ ಪಟ್ಟಣದ ಐತಿಹಾಸಿಕ ಸಕ್ಕರೆ ಕಾರ್ಖಾನೆ!!ವಿಶ್ವ ಮಾನ್ಯತೆಪಡೆದು ಮೆರೆದಿತ್ತು !!!!

                                                                                                                    ಗೆಳೆಯ ಸತ್ಯ ರವರೊಂದಿಗೆ ಶ್ರೀರಂಗ ಪಟ್ಟಣಕ್ಕೆ ಮೈಸೂರಿನಿಂದ ಹೊರಟವನಿಗೆ ರಂಗನ ತಿಟ್ಟಿನ ಸಮೀಪ ಸಿಕ್ಕಿದ ಈ ಪಾಳುಬಿದ್ದ ಗೋಡೆಗಳು ಕಣ್ಣಿಗೆ ಬಿದ್ದವು !ಸ್ಥಳಿಯರನ್ನು ವಿಚಾರಿಸಿದಾಗ ಇದು ಪಾಳು ಬಿದ್ದ ಸಕ್ಕರೆ ಕಾರ್ಖಾನೆಯೆಂದು ತಿಳಿಯಿತು!ನಂತರ ಬಿ.ಎಲ್.ರೈಸ್ ರವರ ಮೈಸೂರ್ ಗೆಜೆತೀರ್ ಹುಡುಕಿದಾಗ ಆಶ್ಚರ್ಯಕರ ವಿಚಾರ ತೆರೆದುಕೊಂಡಿತು!1847  ರಲ್ಲಿ ಸರ್ ಮಾರ್ಕ್ ಕಬ್ಬನ್ [ಬೆಂಗಳೂರಿನ ಕಬ್ಬನ್ ಪಾರ್ಕ್  ಇವರ ಹೆಸರಿನಲ್ಲಿದೆ ]ಮೈಸೂರಿನ ಅಂದಿನ ಕಮಿಷನರ್ ರವರು ಪಾಲಹಳ್ಳಿ ಅಷ್ಟಗ್ರಾಮ ಸಕ್ಕರೆ ಕಾರ್ಖಾನೆ [the ashtagram sugar works}ಸ್ಥಾಪಿಸಿದರೆಂದು ಈ ಭಾಗದ ರೈತರು ಬೆಳೆದ ಕಬ್ಬಿನಿಂದ ಸಕ್ಕರೆ ತಯಾರಿಕೆ ನಡೆದಿತೆಂದು ,ಇಲ್ಲಿನ ಯಂತ್ರ ಗಳನ್ನೂ ಗ್ರೋವ್ಸ್ ಅಂಡ್ ಕಂಪನಿ ಪೂರೈಸಿತೆಂದು,ತಿಳಿದು ಬಂತು!ಹಾಗೆ ಮುಂದುವರೆದು ಈ ಕಾರ್ಖಾನೆಯಲ್ಲಿ 10  ಜನ ಯುರೋಪಿನವರು ಹಾಗು 300 ಮಂದಿ ಸ್ಥಳಿಯರು ಕೆಲಸ ಮಾಡಿರುವುದು ಕಂಡುಬರುತ್ತದೆ!ಇಲ್ಲಿ ತಯಾರಾದ ಹರಳಿನ ಸಕ್ಕರೆ ಉತ್ತಮ ಗುಣಮಟ್ಟದಿಂದ ಪ್ರಸಿದ್ದಿ ಪಡೆದು ಆ ದಿನಗಳಲ್ಲೇ ಲಂಡನ್ನಿನ ಪ್ರದರ್ಶನದಲ್ಲಿ 1851,ಮತ್ತು 1861 ರಲ್ಲಿ ಪ್ರಶಸ್ತಿ ಪಡೆದು ನಂತರ ಪ್ಯಾರಿಸ್ಸ್ಸಿನ ಯುನಿವರ್ಸಲ್ ಪ್ರದರ್ಶನದಲ್ಲಿಯೂ ಸಹ 1867ರಲ್ಲಿ ಅತ್ಯುತ್ತಮ ಸಕ್ಕರೆಯೆಂದು ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡು ಮೆರೆದಿದೆ!ನಂತರ ಹಾಗೆ ಇತಿಹಾಸಕಾರರು ಕಾರಣ ಕಂಡುಹಿಡಿಯಲಾಗದ ಪ್ರಯುಕ್ತ ಕಾರ್ಖಾನೆ ಯಾಕೆ ಮುಚ್ಚಿತು ಎಂಬುದೂ ತಿಳಿದು ಬರುವುದಿಲ್ಲ ! ಅಂದು ವಿಶ್ವ ಮಾನ್ಯತೆ ಪಡೆದು ಮೆರೆದು ಇಂದು ಗತ ನೆನಪಿಗೆ ಸಾಕ್ಷಿಯಾಗಿ ಯಾರು ನಂಬದ ವಿಚಾರಗಳ ಕುರುಹುಗಳಾಗಿ   ಅನಾಥವಾಗಿ ಯಾರಿಗೂ ಬೇಡವಾಗಿ ದಿನ ದಿನವು ಕರಗುತ್ತಾ! ಮರುಗುತ್ತಾ! ನಿಂತಿವೆ .ಚಿತ್ರಗಳನ್ನು ನೋಡಿ ಇತಿಹಾಸಕ್ಕೆ ಹಾಗೂ ಈ ಕಾರ್ಖಾನೆಗೆ   ಒಂದು ಥ್ಯಾಂಕ್ಸ್ ಹೇಳೋಣ ಅಲ್ವ!                                                                                                                                   


ಗುರುವಾರ, ನವೆಂಬರ್ 25, 2010

ಮೈಸೂರ ಅರಸರ ಜನ್ಮ ಸ್ಥಳ ಹಾಗು ಪಾಳು ಬಿದ್ದ ಅರಮನೆ.!!!

ಕಳೆದ ಬಾರಿ ಡಿ. ಹ್ಯಾವಿಲೆಂಡ್  ಸೇತುವೆ ಬಗ್ಗೆ ತಿಳಿದುಕೊಂಡ ನಾವು ಮತ್ತೆ ರಂಗನಾಥನ ದೇವಾಲಯ ಸಮೀಪಕ್ಕೆ ಹೋಗೋಣ ಬನ್ನಿ.ರಂಗನ ಆಲಯದಿಂದ ಹೊರಬಂದರೆ  ಅಲ್ಲೇ ಸಮೀಪದಲ್ಲಿ ನಮಗೆ ಮತ್ತೊಂದು ವಿಶೇಷ ತಿಳಿದು ಬರುತ್ತದೆ!!,ನಿಮ್ಮ ಗಮನಕ್ಕೆ ಒಂದು ಬಿಳಿಯ ಬಣ್ಣದ ಒಂದು ಜಾಲರಿ ಮನೆ ಕಾಣ ಸಿಗುತ್ತದೆ.ಹಾಗು ಪಕ್ಕದಲ್ಲೇ ಒಂದು ಪಾರ್ಕ್ ಸಹ ಸಿಗುತ್ತದೆ.ನಿಮಗೆ ಆಶ್ಚರ್ಯ ವಾಗಬಹುದು ಈ ಬಿಳಿಯ ಬಣ್ಣದ  ಮನೆಯಲ್ಲಿ                                                          ಒಂಬತ್ತನೇ ಜುಲೈ 1784 ರಲ್ಲಿ ಮುಮ್ಮಡಿ ಕೃಷ್ಣ ರಾಜ ವೊಡೆಯರ್ ರವರ ಜನನ ವಾಗಿದೆ.ಹಾಗು ಅದಕ್ಕೆ ಸಂಭಂದಿಸಿದ ಶಾಸನ ಒಂದು ಅಲ್ಲಿ ಲಭ್ಯ ವಿದೆ.[ಇದೆ ಜಾಗದಲ್ಲಿ  ಇತಿಹಾಸದ ಬಗ್ಗೆ  ನನ್ನ ಮೊದಲ ಛಾಯ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು ] ಹಾಗು ಈ ಪ್ರದೇಶಕ್ಕೆ ಹೊಂದುಕೊಂಡಂತೆ  ಹಳೆಯ ಅರಮನೆ ಇದ್ದ ಪ್ರದೇಶ ಕಾಣಸಿಗುತ್ತದೆ.ಹೌದು ಇಲ್ಲಿ ಹಿಂದೆ ವಿಜಯ ನಗರ ಪ್ರತಿನಿಧಿ ಹಾಗು ಮೈಸೂರ ಅರಸರ ಅರಮನೆ  ಇಲ್ಲಿ ಇತ್ತೆಂಬ ಬಗ್ಗೆ ಇತಿಹಾಸ ಹೇಳಿದರೂ ಕಾಲ ಚಕ್ರ ದ ಹೊಡೆತಕ್ಕೆ ಸಿಲುಕಿ ಹಲವಾರು ಸಾಕ್ಷಿಗಳು ನಾಶವಾಗಿವೆ. ಸಿಗುವ ಸಾಕ್ಷಿಗಳ ಆಧಾರದ ನೆಲೆ ಇಲ್ಲಿ ಉತ್ತರಾಭಿಮುಕವಾಗಿ ಒಂದು ಅರಮನೆ ಇತ್ತೆಂಬ ಬಗ್ಗೆ ಅಲ್ಪ ಮಾಹಿತಿ ಸಿಗುತ್ತದೆ. ಬನ್ನಿ ಅರಮನೆ ಇದ್ದ ಜಾಗ ನೋಡೋಣ       ಇದೆ ನೋಡಿ ಇತಿಹಾಸದ ಕುರುಹು ಇಂದು ರಕ್ಷಿಸಲಾಗದ ಸ್ಮಾರಕವಾಗಿ ,ಪುನರ್ನಿರ್ಮಾಣಕ್ಕೆ ಪೂರಕವಾದ ಮಾಹಿತಿಗಳು ಇತಿಹಾಸದ ಕಸದ ಬುಟ್ಟಿ ಸೇರಿರುವ ಕಾರಣ ಒಂದು ಉಧ್ಯಾನವನವಾಗಿ  ಮೂಕವಾಗಿ ಮಲಗಿದೆ. ಹಾಗು ಇಂದಿನ ಜನಾಂಗಕ್ಕೆ ಮಾಹಿತಿ ನೀಡಲಾಗದೆ ಮರುಗಿದೆ................................................!!!  ಇಂದಿಗೆ ಇಷ್ಟು ಸಾಕು ಮುಂದೆ ಮತ್ತೊಂದಿಷ್ಟು ಬರಲಿದೆ ನಿಮಗಾಗಿ . ವಂದನೆಗಳು. 

ಶುಕ್ರವಾರ, ನವೆಂಬರ್ 12, 2010

ಶ್ರೀ ರಂಗ ಪಟ್ಟಣದ ಈ ವಿಸ್ಮಯ ತೂಗು ಸೇತುವೆ ಒಂದು ಶತಮಾನ ಬಾಳಿತ್ತು!!!


ಶ್ರೀ ರಂಗ ನಾಥನ ದರ್ಶನ ಪಡೆದು ಪಾವನ ರಾದ ನಿಮಗೆ  ಬನ್ನಿ ಸನಿಹದಲ್ಲೇ ಇರುವ ಒಂದು ವಿಸ್ಮಯ ಸೃಷ್ಟಿಸಿದ್ದ ಜಾಗಕ್ಕೆ ಕರೆದುಕೊಂಡು ಹೋಗುತ್ತೇನೆ,ಇದೇನು ಪಾಳು ಬಿದ್ದ  ಮುರಿದ ಗೋಡೆಯ ಗುಡ್ಡೆಯ ಜಾಗಕ್ಕೆ ಕರೆದುಕೊಂಡು ಬಂದು ಕಿವಿ ಮೇಲೆ ಹೂ ಇಡುತಿದ್ದಾನೆ ಅಂತೀರಾ.ಹೌದು ಇಲ್ಲಿ ನೋಡಿ  ಡಿ. ಹಾವಿಲೆಂದ್ ಎಂಬ ಫ್ರೆಂಚ್ ಇಂಜಿನಿಯರ್ ಒಬ್ಬ ಟಿಪ್ಪೂ ಆಳ್ವಿಕೆಯಲ್ಲಿ ಈ ಕಮಾನು ತೂಗು ಸೇತುವೆ ನಿರ್ಮಿಸಿದುದಾಗಿ ತಿಳಿದು ಬರುತ್ತದೆ.ಈ ಕಮಾನು ಸೇತುವೆ ಕಾಮನ ಬಿಲ್ಲಿನಿನಂತೆ ಬಾಗಿದ್ದು  ಗಾರೆ ಗಚ್ಚಿನಿಂದ ನಿರ್ಮಿತವಾಗಿತ್ತೆಂದೂ 1808 ರಲ್ಲಿ ನಿರ್ಮಿತಗೊಂಡು   ಸೇತುವೆ ಮೇಲೆ ನಿಂತರೆ ತೂಗುಯ್ಯಾಲೆಯಂತೆ  ಸ್ವಲ್ಪ ತೂಗಾಡುತ್ತಿತ್ತೆಂದು ಹೇಳಲಾಗಿದೆ.ಕಾವೇರಿ ನದಿಗೆ ಅಡ್ಡಲಾಗಿ ಶ್ರೀರಂಗ ಪಟ್ಟಣ ದ್ವೀಪ ಸಂಪರ್ಕಿಸಲು ಇಂತಹ   ಸೇತುವೆ ನಿರ್ಮಿಸಲು ಪ್ರಾಯೋಗಿಕವಾಗಿ ಈ 112 ಅಡಿ ಉದ್ದದ ತೂಗುಸೇತುವೆ ನಿರ್ಮಿಸಲಾಗಿತ್ತು .ಈ ಸೇತುವೆಯ ಪೂರ್ಣ ಚಿತ್ರ ಹಾಲಿ ಲಭ್ಯ ವಿಲ್ಲದ ಕಾರಣ  ಅಂತರ್ಜಾಲದಲ್ಲಿ ಹುಡುಕಾಡಿದಾಗ ಒಂದು ಪುಟ್ಟ ಚಿತ್ರ ಸಿಕ್ಕಿದೆ ಅದಷ್ಟೇ ನಮಗೆ ಸಾವಿರ ಕಥೆ ಹೇಳುತ್ತಿದೆ.ಈ ಕಮಾನು ತೂಗು ಸೇತುವೆ 125 ವರ್ಷ ಬಾಳಿ 2-7 -1936 ರಂದು ಕುಸಿದು ಬಿದ್ದಿದೆ.ಬರಿ ಗಾರೆ ಗಚ್ಚಿನಿಂದ ನಿರ್ಮಿಸಿದ ಈ ತೂಗು ಸೇತುವೆ ಇಂದಿನ ಇಂಜಿನಿಯರ್ ಗಳಿಗೆ ಸವಾಲಾಗಿ  ತಾನಿದ್ದ ಸ್ಥಳ ದಲ್ಲಿ ಮತ್ತೊಬ್ಬ ಇಂಜಿನಿಯರ್ ಬಂದು ತನ್ನನ್ನು ಮರು ನಿರ್ಮಾಣ ಮಾಡುವನೇ ಅಂತಾ ಅಂದಿನಿಂದ  ಕಾಯುತ್ತಾ  ಕುಳಿತಿದೆ.
ಲೈಫ್ ಪತ್ರಿಕೆಯಲ್ಲಿ ಹಲವಾರು ದಶಕಗಳ ಹಿಂದೆ ಪ್ರಕಟವಾದ ಚಿತ್ರ.[ ಚಿತ್ರ ಕೃಪೆ ಅಂತರ್ಜಾಲ  ಹಾಗು ಲೈಫ್ ಪತ್ರಿಕೆ ]
ಆದ್ರೆ ಯಾಕೋ ಪಾಪ ಯಾವ ಇಂಜಿನಿಯರ್ ಗಳೂ  ಈ ಸೇತುವೆಯ ಬಗ್ಗೆ ತಲೆ ಕೆಡಿಸ್ಕೊತಾ ಇಲ್ಲ .ಆದರೆ ಅಚ್ಚರಿ ವಿಚಾರವೆಂದರೆ  ಇತ್ತೀಚಿಗೆ ಅಂತರ್ಜಾಲ ಜಾಲಾಡುತ್ತಿದ್ದಾಗ  ಈ ತೂಗು ಸೇತುವೆಯ  ಮೂಲ  ಚಿತ್ರಣದ  ಒಂದು ಚಿತ್ರ ಸಿಕ್ಕಿತು.ಇದು ಈವರೆಗಿನ ಅಧಿಕೃತ ಚಿತ್ರವೆಂದು ಪರಿಗಣಿಸಬಹುದು. ಇದನ್ನು ನೋಡಿದರೆ ತೂಗುಸೇತುವೆ ನಿರ್ಮಾಣದ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಅಂದಿನ ತಾಂತ್ರಿಕತೆಯ ಅದ್ಭುತ ಒಂದು ಮುರಿದ ಸ್ಮಾರಕವಾಗಿ ಶ್ರೀ ರಂಗ ಪಟ್ಟಣ ದಲ್ಲಿ ಪ್ರವಾಸಿಗರಿಗಾಗಿ ಕಾಯುತ್ತಾ ಕುಳಿತಿದೆ. ನೀವೂ ಒಮ್ಮೆ ಹೋಗಿ ನೋಡಿ ಬನ್ನಿ.ನಮಸ್ಕಾರ  ಮತ್ತೆ ಸಿಗೋಣ.

ಭಾನುವಾರ, ಅಕ್ಟೋಬರ್ 24, 2010

ಪಶ್ಚಿಮ ರಂಗನ ಆಲಯದ ಒಳಗೆ !!!ವಿಸ್ಮಯ ಶಿಲ್ಪ ಕಲೆ.!!!

ಇದೇನ್ರೀ ವಿಶ್ರಾಂತಿ ಅಂತ ಹೇಳಿ ಹೋದವ ಪತ್ತೇನೆ ಇಲ್ಲಾ !! ಅಂತಾ ಬೈದಿರ್ತೀರ ಗೊತ್ತು ಕ್ಷಮೆ ಇರಲಿ  ಮಾಹಿತಿ ಕ್ರೂಡೀಕರಣ      ಪರಿಶೀಲನೆ ಇತ್ಯಾದಿ ಗಳಿಂದ ವಿಳಂಭ ವಾಗಿದೆ.ಬನ್ನಿ ಪಶ್ಚಿಮ ರಂಗನ ಆಲಯ ದೊಳಗೆ ತೆರಳೋಣ.ಗರುಡ ಗಂಬದ ಆವರಣದ ಮೂಲಕ ತೆರಳುವಾಗ ನಿಮಗೆ ಎತ್ತರದ ಗರುಡ ಗಂಬ ಚಾವಣಿ ಮೂಲಕ ತೋರಿ ಹೋಗಿರುವುದು ಕಂಡು ಬರುತ್ತದೆ. ಇದು ಇಲ್ಲಿನ ವಿಶೇಷ.  ಮುಂದೆ ಸಾಗೋಣ  ಬನ್ನಿ ಗರುಡ ದೇವನ ಉತ್ಸವ ಮೂರ್ತಿ ಮನಸೆಳೆಯುತ್ತದೆ.ವಿಷ್ಣು ದೇವಾಲಯಗಳಲ್ಲಿ ಸಾಮಾನ್ಯವಾಗಿ ಗರುಡ ವಾಹನ ಉತ್ಸವ ನಡೆಸಲು ಇಂತಹ ಮೂರ್ತಿಗಳನ್ನು ಬಳಸುತ್ತಾರೆ.ಅರೆ ಪಕ್ಕದಲ್ಲೇ ಗಜ ಉತ್ಸವ ಮೂರ್ತಿ ಇದೆ.ಇದು ವಿಶೇಷ ದಿನಗಳಲ್ಲಿ ಮಾತ್ರ ಉಪಯೋಗಿಸಲ್ಪಡುತ್ತದೆ. ಮುಂದೆ ಸಾಗಿ ದ್ವಾರ ಪ್ರವೇಶಿಸಿದರೆ  ಸಿಗುವುದು ಸುಂದರ ದ್ವಜ ಸ್ಥಂಬ  ಇರುವ ಆವರಣ  ವಿಶಿಷ್ಟ  ಶೈಲಿಯಲ್ಲಿ ಕೆತ್ತಿರುವ ಸುಂದರ ವಿವಿಧ ಬಗೆಯ ಕಲ್ಲಿನ ಕಂಬಗಳಲ್ಲಿ ಹೊಯ್ಸಳ ಶಿಲ್ಪಿ ಕಲೆ  ಅನಾವರಣಗೊಳ್ಳುವುದು.ಆವರಣದ ಪ್ರವೇಶ ದ್ವಾರದ ಎಡಕ್ಕೆ ತಿರುಗಿ  ಬನ್ನಿ  " ವೈನತೆಯ ಸ್ವಾಮೀ" ದರ್ಶನ ವಾಗುತ್ತದೆ. ಮುಂದೆ ಸಾಗಿದರೆ ನವರಂಗದ ಪ್ರವೇಶ ಅಲ್ಲಿಯೂ ಅಷ್ಟೇ ಸುಂದರ ಹೊಯ್ಸಳ ಶೈಲಿ ಕೆತ್ತನೆ ಹೊಂದಿದ ಕಲ್ಲು ಕಂಬಗಳು.ಇಲ್ಲಿಂದ ಸಾಗಿದರೆ ನಿಮಗೆ ವಿಶೇಷ ದಿನಗಳಲ್ಲಿ ಕತ್ತಲೆ ಪ್ರದಕ್ಷಿಣೆ  ಅವಕಾಶ ದೊರಕುತ್ತದೆ.ಉತ್ತರಾಯಣ ಪುಣ್ಯ ಕಾಲದಲ್ಲಿ ಈ ಕತ್ತಲೆ ಪ್ರದಕ್ಷಿಣ ದ್ವಾರ ದ ಮೂಲಕ ಕತ್ತಲೆ ಪ್ರಾಕಾರದಲ್ಲಿ [ ಇದು ವರ್ಷಕ್ಕೊಮ್ಮೆ ಮಾತ್ರ ಸಿಗುವ ಅವಕಾಶ ] ಶ್ರೀ ರಂಗನ ಸುತ್ತ ಪ್ರದಕ್ಷಿಣೆ ಬರಬಹುದು.ಕತ್ತಲೆ ಪ್ರದಕ್ಷಿಣೆ ಹಾದಿಯಲ್ಲಿ ಇಡಿ ಗರ್ಭ ಗೃಹ  ನಕ್ಷತ್ರಾಕಾರದಲ್ಲಿ ನಿರ್ಮಿತಗೊಂಡಿರುವುದನ್ನು ಕಾಣಬಹುದು.ಪ್ರದಕ್ಷಿಣೆ ಆಯ್ತು ಬನ್ನಿ ಗರ್ಭಗೃಹ ದತ್ತ ಸಾಗೋಣ ದ್ವಾರದ ಎರಡೂ ಬದಿಯಲ್ಲಿ ಸುಂದರ ದ್ವಾರಪಾಲರ ಮೂರ್ತಿಗಳು ಕಾಣಸಿಗುತ್ತವೆ. ತಲೆ ಎತ್ತಿ ನೋಡಿದರೆ ಗರ್ಭಗೃಹದ ಬಾಗಿಲ ಮೇಲ್ಪಟ್ಟಿಯ ಮೇಲೆ ವಿಷ್ಣು ಅವತಾರಗಳ ಕೆತ್ತನೆ ನೋಡಬಹುದು.ಭಕ್ತಿ ಪರವಶತೆ ಇಂದ ಮುಂದೆ ಬನ್ನಿ ನೋಡಿ ಇವನೇ ನಮ್ಮಗೌತಮ ರಂಗನಾಥ ,ಪಶ್ಚಿಮ ರಂಗನಾಥ,ಆದಿ ರಂಗನಾಥ
ಶ್ರೀ ರಂಗನಾಥ ಸ್ವಾಮಿ  ಮೂಲ ದೇವರು [ ಚಿತ್ರ ಕೃಪೆ ಗೂಗಲ್ ಇಮೇಜಸ್ ಅಂತರ್ಜಾಲ ]
ಒಟ್ಟಿನಲ್ಲಿ ಭಕ್ತರ ಇಷ್ಟದ ರಂಗನಾಥ!!! ಹೆಡೆ  ಬಿಚ್ಚಿದ ಶೇಷ ಶಯನದಲ್ಲಿ ಪವಡಿಸಿಹ ರಂಗನಾಥ ತನ್ನ  ಬಲಗೈಯನ್ನು  ಮಡಿಸಿ ತಲೆಗೆ ಆಸರೆ ನೀಡಿ  ಎಡಗೈಯನ್ನು ದೇಹಕ್ಕೆ ಸಮನಾಗಿ ಚಾಚಿ ಕಿರೀಟ ಧಾರಿಯಾಗಿ ಪೂರ್ವಕ್ಕೆ ಮುಖಮಾಡಿ  ಮಲಗಿದ್ದಾನೆ  ಪಾದದ ಬಳಿ ಕಾವೇರಿ ಕುಳಿತು ಸೇವೆ ಮಾಡುತಿರಲು ಗೌತಮ ಋಷಿಗಳು ಪಾದದ ಬಳಿ ಭಕ್ತಿ ಇಂದ  ನಿಂತಿರುವ ಮೂರ್ತಿಇದೆ.ಬನ್ನಿ ರಂಗನ ಪ್ರಾರ್ಥಿಸೋಣ. ಮುದ್ದು ರಂಗನ ದರ್ಶನ ಪಡೆದು ದಕ್ಷಿಣ ದಿಕ್ಕಿಗೆ ಇರುವಬಾಗಿಲ ಮೂಲಕ ಹೊರಗೆಬಂದು  ಹೊರ ಆವರಣ ಕ್ಕೆ ಬರೋಣ ನಂತರ  ಬಲಕ್ಕೆ ತಿರುಗಿ ಚಲಿಸೋಣ ಇಲ್ಲಿ ಬನ್ನಿ ನರಸಿಂಹ , ಸುದರ್ಶನ ಸನ್ನಿಧಿಯಲ್ಲಿ   ದರ್ಶನ ಮಾಡಿ ಮುಂದೆ ಬನ್ನಿ ಉತ್ತರಕ್ಕೆ ಸಾಗೋಣ ನಂತರ  ಸಿಗುವುದು ಗೋಪಾಲ ಕೃಷ್ಣ ಸನ್ನಿಧಿ  ಇಲ್ಲಿ ದರುಶನ ಪಡೆದು ಮುಂದೆ ಹೋದರೆ ಸಿಗುವುದು ರಂಗನಾಯಕಿ ಅಮ್ಮ ನವರ ಸನ್ನಿಧಿ " ತಲಕಾಡು ಮರಳಾಗಲಿ ಮಾಲಂಗಿ   ಮಡು ವಾಗಲಿ   "  ಎಂಬ  ಶಾಪಕ್ಕೂ ಇಲ್ಲಿನ ಸನ್ನಿಧಿ ಗೂ ಸಂಭಂದ ವಿದೆ.ರಂಗನಾಯಕಿ ಅಮ್ಮ ನವರ ದರ್ಶನ ಪಡೆದು ರಂಗನ ಪಾದಕ್ಕೆ ಶರಣಾಗಿ ಪೂರ್ವದ ಕಡೆ ನಡೆದರೆ ಆಳ್ವಾರ ರ ಮೂರ್ತಿಗಳ ದರ್ಶನ ಪಡೆದು ಪೂರ್ವಕ್ಕೆ ಮುಖಮಾಡಿರುವ ವೆಂಕಟೇಶನ ದರ್ಶನ ಪಡೆದು ಇವನ ಎದುರಲ್ಲಿ ನಿಂತಿರುವ ಹನುಮಂತ ದೇವರ ದರ್ಶನ ಪಡೆದು ಪಾವನರಾಗಿ ಹೊರ ಬನ್ನಿ!!! ಅಬ್ಭ ಸುಸ್ತಾಯ್ತಾ !!! ಹೌದು ವಿಶಾಲವಾದ ದೇವಾಲಯ ದರ್ಶನ ಮಾಡುವಾಗ ಇದು ಸಾಮಾನ್ಯ.ಬನ್ನಿ ವಿಶ್ರಮಿಸೋಣ ಶ್ರೀ ರಂಗ ನಾಥ ನಿಗೆ ಸಂಕ್ರಾಂತಿ ಯ ಉತ್ತರಾಯಣ ಪುಣ್ಯದ ಕಾಲದಲ್ಲಿ ನಡೆಯುವ ಲಕ್ಷ ದೀಪೋತ್ಸವ ಹಾಗೂ ರಥ ಸಪ್ತಮಿ ರಥೋತ್ಸವ ವಿಶೇಷ ದಿನಗಳು .ಬನ್ನಿಲಕ್ಷ ದೀಪೋತ್ಸವದ  ಬೆಳಕಿನ ವೈಭವ ನೋಡೋಣ      ಶ್ರೀ ರಂಗ ಪಟ್ಟಣದ  ದ್ವೀಪದಲ್ಲಿ  ಹಣತೆಯ ದೀಪಗಳು  ರಂಗುಚೆಲ್ಲಿ ರಂಗನ ಕೀರ್ತಿ ಬೆಳಗುತ್ತಿವೆ.ಇಲ್ಲಿಗೆ ಶ್ರೀ ರಂಗ ನಾಥ ದೇವಾಲಯ ಪರಿಚಯ ಮುಗಿಯಿತು. ಮುಂದಿನ ಸಂಚಿಕೆಯಲ್ಲಿ ಮತ್ತೊಂದು ಸ್ಮಾರಕ ಪರಿಚಯ ಮಾಡಿಕೊಳ್ಳೋಣ .   ಪರಿಚಯ ಮಾಡಿಕೊಂಡ ನಿಮಗೆ ವಂದನೆಗಳು.

ಭಾನುವಾರ, ಸೆಪ್ಟೆಂಬರ್ 19, 2010

ಬನ್ನಿ ಕಾವೇರಿ ರಂಗನ ದರುಶನಕೆ !!! ದೇವಾಲಯದ ಅಂಗಳಕೆ !!!



ಪಂಡಿತ್ ಭೀಮ್ ಸೇನ್ ಜೋಷಿಯವರು ಭಕ್ತಿ ತುಂಬಿ ಹಾಡಿದ ಕಂಗಳಿದ್ಯಾತಕೋ ಹಾಡಿನಿಂದ ನಿಮ್ಮನ್ನು ಸ್ವಾಗತಿಸುತ್ತೇನೆ. ಬನ್ನಿ ಕಾವೇರಿ ರಂಗನ ದರುಶನಕ್ಕೆ ಮೊದಲು ಕಾವೇರಿ ನದಿಗೆ ಹೋಗಿ ಬರೋಣ ಶ್ರೀ ರಂಗ ಪಟ್ಟಣದ  ಆದಿ ರಂಗನ  ,[ ಪಶ್ಚಿಮ ರಂಗ, ಗೌತಮ ರಂಗ , ಕಾವೇರಿ ರಂಗ  ಇನ್ನೂ ಹಲವಾರು ಹೆಸರಿನಿಂದ ಕರೆಯಬಹುದು ] ಸನ್ನಿದಾನದಲ್ಲಿ ಶ್ರೀ ರಂಗ ಪಟ್ಟಣದ ಸುತ್ತ  ಪ್ರೀತಿಯ ಆಲಿಂಗನ  ಮಾಡುವ ಕಾವೇರಿ ತಾಯಿಯ  ದರುಶನ ಮಾಡಿ ರಂಗನ ದರುಶನಕೆ  ಸಿದ್ದರಾಗೋಣ. ಸಾಮಾನ್ಯ ವಾಗಿ ಬರುವ  ಪ್ರವಾಸಿಗಳಿಗೆ ಸಾಕಷ್ಟು ಸಮಯ ಇಲ್ಲದ ಕಾರಣ ನಿಧಾನವಾಗಿ ದೇವಾಲಯ ನೋಡಲು ಸಾಧ್ಯವಾಗದು.ಬನ್ನಿ ಮುಂದೆ ಹೋಗೋಣ.ಬನ್ನಿ   ಶ್ರೀ ರಂಗ ನಾಥ ನ ಆಲಯ ಪೂರ್ವಾಭಿಮುಖ ವಾಗಿದೆ ಒಳಗೆ ಪ್ರವೇಶಿಸುವಾಗ  ತಕ್ಷಣವೇ ಬಾಗಿಲಿನ ಒಳಗಡೆ ಗೋಡೆಗೆ ತಾಗಿದಂತೆ ಶ್ರೀ ರಂಗ ನಾಥನ ದರ್ಶನ ಭಾಗ್ಯ ಈ ರೀತಿ ಆಗುತ್ತದೆ.ಬಹುಷಃ  ಯಾವುದೇ ದೇವಾಲಯದಲ್ಲಿಯೂ ಪ್ರವೇಶ ದ್ವಾರದಲ್ಲಿ  ಮುಖ್ಯ  ದೇವರು ಇರುವುದು ನನಗೆ ತಿಳಿದಿಲ್ಲ.ಗರ್ಭ ಗುಡಿಯ ರಂಗನಾಥನ  ಮೊದಲು ಇಲ್ಲೇ ನಿಮಗೆಪ್ರಥಮ ದರ್ಶನ್ ಸಿಗುತ್ತದೆ. ಹಾಗೆ ಬನ್ನಿ ದೇವಾಲಯದ ಒಳ ಆವರಣಕ್ಕೆ ಹೋಗೋಣ.ಸುಂದರ ಮುಖ ಮಂಟಪದ ಮೊಗಸಾಲೆಯಲ್ಲಿ ನಿಮ್ಮನ್ನು ವಿಷ್ಣುವಿನವಿವಿಧ ಅವತಾರಗಳ ಅಪರೂಪದ ದರ್ಶನ ನಿಮಗೆ ಸಿಗುತ್ತದೆ.ಹಾಗೆ ಎಡಗಡೆ ಪಕ್ಕಕ್ಕೆ ಬನ್ನಿ ಪ್ರದಕ್ಷಿಣೆ ಹಾಕಿದ ಹಾಗು ಆಗುತ್ತೆ ದೇವಾಲಯ ನೋಡಿದ ಹಾಗು ಆಗುತ್ತೆ.ಅರೆ ಇಲ್ಲೊಂದು ಶಾಸನ ಕಲ್ಲು ಇದೆತಮಿಳು ಲಿಪಿ ಹೊಂದಿರುವ ಇದು ಮಸುಕಾಗಿದೆ. ಅಕ್ಷರಗಳು ಸ್ಪಷ್ಟವಾಗಿ ಕಾಣುವುದಿಲ್ಲ . ಬಿ.ಎಲ್.ರೈಸ್  ರವರ ಪ್ರಕಾರ ಈ ಶಾಸನವು  ಕ್ರಿ.ಶ. ೧೨೧೦ ಕ್ಕೆ ಸಂಭಂದಿಸಿದೆ ಎಂದು ತಿಳಿಸುತ್ತದೆ,.ವೀರ ಭಲ್ಲಾಳ ದೇವನ ಆಳ್ವಿಕೆ ಉಲ್ಲೇಖವಿದ್ದು  ಗ್ರಾಮ ದತ್ತಿ ನೀಡಿದ ಬಗ್ಗೆ  ಮಾಹಿತಿ ನೀಡುತ್ತದೆ.ಸ್ವಲ್ಪ ದೂರದಲ್ಲಿ ಕೆಲವು ಹೆಜ್ಜೆ ಹಾಕಿದರೆ ಒಂದು ಕಲ್ಲಿನ ಮಂಟಪ ನೋಡಬಹುದು  ಕೆಲವೇ ಹೆಜ್ಜೆಗಳನ್ನು ಉತ್ತರದ ಕಡೆ ಹಾಕಿದರೆ ಸಿಗುವುದೇ  ಮತ್ತೊಂದು ವಿಷ್ಣು ಸನ್ನಿದಿ  ಇಲ್ಲಿ ಶ್ರೀನಿವಾಸನ ದೇವಾಲಯ ವಿದೆ ವಿಶೇಷ ದಿನಗಳಲ್ಲಿ ಇಲ್ಲಿ ಪೂಜಾ ಕಾರ್ಯಕ್ರಮಗಳು ಜರುಗುತ್ತವೆ. ಮಕರ ಸಂಕ್ರಾಂತಿಯ ಉತ್ತರಾಯಣ ಪುಣ್ಯ ಕಾಲದಲ್ಲಿ ಸ್ವರ್ಗದ ಬಾಗಿಲು ಮೂಲಕ ಬರುವ ಭಕ್ತಾದಿಗಳಿಗೆ ಇಲ್ಲಿನ ಶ್ರೀನಿವಾಸನ ದರ್ಶನ ಭಾಗ್ಯ ದೊರಕುತ್ತದೆ.ಈ ದೇವಾಲಯದಲ್ಲಿ ಕಲ್ಲಿನ ಎರಡು ಆನೆಗಳ ಮೂರ್ತಿಗಳು ನೋಡಲು ಸುಂದರವಾಗಿವೆ.ಮುಂದೆ ಸ್ವಲ್ಪ ದೂರ ಹೆಜ್ಜೆ ಹಾಕಿದರೆ ನಿಮಗೆ ಸಿಗುವ ಬಾಗಿಲು "ಸ್ವರ್ಗದಬಾಗಿಲು " ಉತ್ತರಾಯಣ ಪುಣ್ಯ ಕಾಲದಲ್ಲಿ ಈ ಬಾಗಿಲ ಮೂಲಕ ಮೊದಲು ಶ್ರೀ ರಂಗ ನಾಥ ಉತ್ಸವ ಹೊರಬರುತ್ತದೆ ನಂತರ ಭಕ್ತಾದಿಗಳು ಅನುಸರಿಸುತ್ತಾರೆ. ವರ್ಷಕ್ಕೊಮ್ಮೆ ಮಾತ್ರ ಈ ಬಾಗಿಲು ತೆರೆಯಲ್ ಪಡುತ್ತದೆ .ಹಾಗೆ ಬನ್ನಿ ನಿಮಗೆ ಈಗ ಸಿಗುವುದು ಒಂದು ಕಲ್ಲಿನ ಮಂಟಪದ ಹತ್ತಿರ ವೃಂದಾವನ  ಹತ್ತಿರಬನ್ನಿ  ನೋಡೋಣ.ವೃಂದಾವನದ ನಾಲ್ಕು  ದಿಕ್ಕುಗಳಿಗೂ ಮುಖಮಾಡಿದ ದಕ್ಷಿಣಕ್ಕೆ ಮುಖಮಾಡಿದ ಶ್ರೀ ರಂಗನಾಥ , ಪಶ್ಚಿಮ ದಿಕ್ಕಿಗೆ ವೇಣುಗೋಪಾಲ,ಉತ್ತರ ದಿಕ್ಕಿಗೆ ಜನಾರ್ಧನ ಹಾಗು ಪೂರ್ವ ದಿಕ್ಕಿಗೆ ಕೃಷ್ಣ  ನ ದರ್ಶನ ಸಿಗುತ್ತದೆ. ದಕ್ಷಿಣಕ್ಕೆ ಮುಖಮಾಡಿರುವ ರಂಗನಾಥನ ವಿಗ್ರಹದ ಶೇಷನ ಹೆಡೆ ಸ್ವಲ್ಪ ಮುಕ್ಕಗಿದೆ ಉಕಿದಂತೆ ನೋಡಲು ಸುಂದರವಾಗಿದೆ. ಇದರ ಪಕ್ಕದಲ್ಲೇ ಒಂದು ಪುಟ್ಟ ಕೊಳವಿದ್ದು ನೋಡಲು ಸುಂದರವಾಗಿದೆ. ಕೆಲವೇ ಹೆಜ್ಜೆಗಳ ಅಂತರದಲ್ಲಿ ಮತ್ತೊಂದು ಶಾಸನ ಕಲ್ಲಿದೆ ಈ ಶಾಸನದಲ್ಲಿ ವಿಜಯನಗರ ದ  ಅಚ್ಯುತ ದೇವರಾಯನ  ಉಲ್ಲೇಖವಿದ್ದು  ಆ ಸಮಯದಲ್ಲಿ ನೀಡಿದ ದತ್ತಿಗಳ ಬಗ್ಗೆ ತಿಳಿಸಲಾಗಿದೆ. ಇಲ್ಲಿಗೆ ಮೊದಲ ಹೊರ ಪ್ರಾಂಗಣದ ಪ್ರದಕ್ಷಿಣೆ ಮುಗಿಯುತ್ತದೆ.ಈ ಗಾಗಲೇ ನೀವು ಎರಡು ಭಾರಿ ಶ್ರೀ ರಂಗ ನಾಥನ ದರ್ಶನ ಮಾಡಿದ್ದೀರಿ  ಇನ್ನೂ ಹಲವಾರು ಮಾಹಿತಿಗಳಿವೆ   ಪಶ್ಚಿಮ ರಂಗನಾಥನ ದರ್ಶನ ಮಾಡುವ ಮೊದಲು ಸ್ವಲ್ಪ ವಿಶ್ರಾಂತಿ ಪಡೆಯಿರಿ   ಮತ್ತೆ ಮುಂದುವರೆಯೋಣ.ಓ.ಕೆ.