ಶ್ರೀ ರಂಗಪಟ್ಟಣದ ಸ್ಮಾರಕ ಪರ್ಯಟನೆ ಯಾತ್ರೆಯಲ್ಲಿ ಕಳೆದಬಾರಿ ಡೆಲ್ಲಿ ಗೇಟ್ ಬಗ್ಗೆ ಮಾಹಿತಿ ನೀಡಿದ್ದೆ, ಬನ್ನಿ ಇನ್ನೊಂದು ವಿಸ್ಮಯ ಸ್ಮಾರಕ ಪರಿಚಯ ಮಾಡಿಕೊಳ್ಳೋಣ.ಶ್ರೀರಂಗಪಟ್ಟಣ ದಲ್ಲಿ ನಿಮಗೆ ಕೆಲವುಕಡೆ " ಪಿರಮಿಡ್ " ಆಕಾರದ ಕೆಲವು ಕಟ್ಟಡಕಾಣಲು ಸಿಗುತ್ತವೆ , ಶ್ರೀ ರಂಗಪಟ್ಟಣ ಕ್ಕೂ ಈಜಿಪ್ಟ್ ಗೂ ಏನಾದರೂ ಸಂಭಂದವಿದೆಯಾ ಅಂತಾ ಅನುಮಾನ ಬರುತ್ತೆ . ಆದ್ರೆ ಕ್ಷಮಿಸಿ ಇವುಗಳನ್ನು ಈಜಿಪ್ಟ್ ನವರು ನಿರ್ಮಿಸಿದ್ದಲ್ಲಾ , ಇದನ್ನು ಶ್ರೀ ರಂಗಪಟ್ಟಣ ಕೋಟೆ ಸಂರಕ್ಷಣೆಗೆ ಅಗತ್ಯವಿರುವ ಮದ್ದು ಗುಂಡು ಸಂರಕ್ಷಿಸಲುಹಾಗೂ ಯುದ್ದದ ಸಮಯದಲ್ಲಿ ಆಯಕಟ್ಟಿನ ಪ್ರದೇಶಗಳಲ್ಲಿ ಕ್ಷಿಪ್ರವಾಗಿ ಕೋಟೆಯ ಎಲ್ಲಾ ಭಾಗಕ್ಕೂ ಮದ್ದು ಗುಂಡುಗಳು ಸರಬರಾಜು ಆಗುವಂತೆ ವೈಜ್ಞಾನಿಕವಾಗಿ ಯೋಚಿಸಿ ನಿರ್ಮಿಸಿದಂತ ಮದ್ದಿನ ಮನೆಗಳು. ಒಳಗಡೆ ಕಾಲಿಟ್ಟರೆ ನೆಲಮಾಳಿಗೆ ಸಿಗುತ್ತದೆ ಅಲ್ಲಿ ಒಂದು ವಿಶಾಲವಾದ ಪ್ರದೇಶದಲ್ಲಿ ಮದ್ದು ಗುಂಡುಗಳನ್ನು ಸುರಕ್ಷಿತವಾಗಿ ಸಂಗ್ರಹ ಮಾಡುತಿದ್ದುದು ಕಂಡು ಬರುತ್ತದೆ. ಈ ಮನೆಯ ಒಳ ಹೊಕ್ಕರೆ ಬೇಸಿಗೆಯಲ್ಲಿ ತಂಪಾಗಿಯೂ, ಚಳಿಗಾಲದಲ್ಲಿ ಬೆಚ್ಚಗೆ , ಮಳೆಗಾಲದಲ್ಲಿ ಶೀತವಿಳಿಯದೆ ಮದ್ದು ಗುಂಡುಗಳು ಪ್ರಕೃತಿ ವಿಕೋಪಕ್ಕೆ ಸಿಲುಕದಂತೆ ಎಚ್ಚರಿಕೆಯಿಂದ ಈ ಮನೆಯ ನಿರ್ಮಾಣ ಮಾಡಿದ್ದಾರೆ. ಬನ್ನಿ ಹತ್ತಿರದಲ್ಲೇ ಇರುವ ಮತ್ತೊಂದು ವಿಸ್ಮಯ ನೋಡೋಣ ಚಿತ್ರದಲ್ಲಿ ಕಾಣುತ್ತಿರುವುದು ಗ್ಯಾರಿಸನ್ ಆಸ್ಪತ್ರೆ ಯುದ್ದದ ಸಮಯದಲ್ಲಿ ಗಾಯಗೊಂಡ ಬ್ರಿಟೀಶ್ ಪರ ಅಧಿಕಾರಿಗಳಿಗೆ, ಸೈನಿಕರಿಗೆ ಇಲ್ಲಿ ಚಿಕಿತ್ಸೆ ನೀದಲಾಗುತ್ತಿತ್ತೆಂದು ಹೇಳುತ್ತಾರೆ.1799 ರಲ್ಲಿ ಇದನ್ನು ಲಾರ್ಡ್ ವೆಲ್ಲೆಸ್ಲಿ [ ಡ್ಯೂಕ್ ಆಫ್ ವೆಲ್ಲಿಂಗ್ಟನ್ ] ನಿರ್ಮಾಣ ಮಾಡಿದನೆಂದು ತಿಳಿದುಬರುತ್ತದೆ.ಹಾಗೂ ಈ ಆಸ್ಪತ್ರೆ ಸುಮಾರು ವರ್ಷ ತನ್ನ ಸೇವೆ ಸಲ್ಲಿಸಿದ್ದಾಗಿ . ತಿಳಿದು ಬರುತ್ತದೆ. ಐತಿಹಾಸಿಕ ಮಹತ್ವಉಳ್ಳ ಇಂತಹ ಸ್ಮಾರಕಗಳು ಕಣ್ಮರೆಯಾಗುತ್ತಿರುವುದು ಇತಿಹಾಸದ ಅವನತಿಯೇ ಸರಿ.
ಸಕ್ಕರೆ ಜಿಲ್ಲೆ ಮಂಡ್ಯದಲ್ಲಿನ ಐತಿಹಾಸಿಕ ಶ್ರೀ ರಂಗಪಟ್ಟಣ ದಲ್ಲಿರುವ ಸ್ಮಾರಕ ಲೋಕದೊಳಗೆ ಒಂದು ಸುತ್ತು.ನಿಜದ ಇತಿಹಾಸ ಕಾವೇರಿ ಹಾಗೂ ಶ್ರೀ ರಂಗನಾಥನಿಗೆ ಮಾತ್ರ ಗೊತ್ತು!!
ಭಾನುವಾರ, ಜನವರಿ 30, 2011
ಭಾನುವಾರ, ಜನವರಿ 9, 2011
ಡೆಲ್ಲಿ ಬ್ರಿಡ್ಜ್ ಗೇಟಿನ ಒಳಗೆ ಹೊಕ್ಕಾಗ ಅವಿತು ಕುಳಿತಿದ್ದ ಹನುಮ ,ಗಣೇಶ!!!
ಕಳೆದ ಸಂಚಿಕೆಯಲ್ಲಿ ಶ್ರೀ ರಂಗ ಪಟ್ಟಣದ ಅಂತಿಮ ಯುದ್ದದ ನೆನಪಿಗಾಗಿ ನಿರ್ಮಿಸಿರುವ ಶತಮಾನ ದಾಟಿದ ಯುದ್ದ ಸ್ಮಾರಕದ ಬಗ್ಗೆಪರಿಚಯ ಮಾಡಿಕೊಟ್ಟಿದ್ದೆ. ಬನ್ನಿಸನಿಹದಲ್ಲೇ ಇರುವ ಡೆಲ್ಲಿ ಗೇಟಿನ ಒಳಗಡೆ ಹೋಗಿಬರೋಣ.ನಾನು ಹಲವಾರು ಬಾರಿ ಓಡಾಡಿದ್ದರೂ ಕೂಡ ಹಲವು ತಿಂಗಳು ಈ ಜಾಗದ ಪೂರ್ಣ ವಿವರ ತಿಳಿದಿರಲಿಲ್ಲ ,ನಂತರ ಒಬ್ಬ ಸ್ನೇಹಿತರು ನನ್ನನ್ನು ಈ ಜಾಗಕ್ಕೆ ಕರೆದುಕೊಂಡು ಹೋಗಿ ಇದನ್ನು ತೋರಿಸಿದರು.ನಂತರ ನಾನು ಯುದ್ದ ಸ್ಮಾರಕ ನೋಡಲು ಬಂದರೆ ಈ ಜಾಗಕ್ಕೆ ತಪ್ಪದೆ ಭೇಟಿ ಕೊಡುತ್ತೇನೆ.ಯುದ್ದ ಸ್ಮಾರಕ ನೋಡಲು ತೆರಳುವ ಹಾದಿಯಲ್ಲಿ ನಿಮಗೆ ಬಲಭಾಗಕ್ಕೆ ಒಂದು ಕಮಾನು ಗೇಟು
ಕಾಣಿಸುತ್ತದೆ ,ಅದರ ಕಲ್ಲಿನ ಕಮಾನಿನ ಮೇಲೆ 'GATE TO DELHI BRIDGE'' ಎಂದುಬರೆಯಲಾಗಿದೆ.ನೋಡಿದವರಿಗೆ ಆಶ್ಚರ್ಯ ತರಿಸುವ ಈ ಕಮಾನು ಹೊಕ್ಕಿಒಳ ನಡೆದರೆ ನಿಮಗೆ ಬೇರೆಯದೇ ದರ್ಶನ ವಾಗುತ್ತದೆ ಅಲ್ಲಾ ಎಲ್ಲಿಯ ಡೆಲ್ಲಿ ಎಲ್ಲಿಯ ಶ್ರೀ ರಂಗ ಪಟ್ಟಣ ಅಂತಾ ಅನ್ನಿಸಲು ಶುರುಮಾಡುತ್ತೆ ,ಬನ್ನಿ ಒಳಗಡೆ ಹೋಗೋಣ .ಅರೆ ಇದೇನು ಇದೆಲ್ಲಾ ಶಿಥಿಲ ಗೊಂಡ ಕೋಟೆಯ ಸಾಮ್ರಾಜ್ಯ ಬ್ರಿಟೀಷರ ಸೈನ್ಯದ ದಾಳಿಗೆ ಸಿಕ್ಕಿ ನಲುಗಿದ ಕೋಟೆಯ ಅವಶೇಷಗಳು , ಇವನ್ನು ನೋಡಿ ಮುಂದುವರೆದರೆ ದಾಳಿಗೂ ಹೆದರದೆ ಜಗ್ಗದೆ ನಿಂತ ಕೋಟೆಯ ಒಳಭಾಗದ ಗೋಡೆಯ ಬುರುಜುಗಳ ದರ್ಶನ ಆಗುತ್ತದೆ. ಸ್ವಲ್ಪ ಮುಂದೆ ಬನ್ನಿ ಇಲ್ಲೊಂದು ಸಣ್ಣ ಬಾಗಿಲು ಇದೆ ಒಳಗಡೆ ಹೋಗೋಣ ಅರೆ ಕಾವೇರಿ ನದಿಯ ನೀರು ಕಂದಕದಲ್ಲಿ ಕಾಣುತ್ತದೆ . ಬಂದ ಹಾದಿಯಲ್ಲೇ ಮುಂದುವರೆದರೆ ಗಿಡ ಗಂಟಿ, ಬಳ್ಳಿಗಳಿಂದ ಮುಚ್ಚಿದ ಒಂದು ಗೋಡೆ ಕಾಣ ಸಿಗುತ್ತದೆ .ಅರೆ ಎತ್ತರದ ಗೋಡೆಯ ಮೇಲೆ ಎರಡುಕಲ್ಲಿನ ಚೌಕಟ್ಟಿನಲ್ಲಿ ಹನುಮಂತ ಹಾಗು ಗಣೇಶನ ವಿಗ್ರಹಗಳ ಮೂರ್ತಿ ಕಾಣಸಿಗುತ್ತವೆ.ಇದನ್ನು ಗೆಜೆಟ್ಟಿನಲ್ಲಿ ಹಿಂದೂ ವಾಲ್ ಅಥವಾ ವಿಜಯನಗರ ವಾಲ್ ಅಂತಾ ಉಲ್ಲೇಖಿಸಲಾಗಿದೆ.ಹೌದು ಶ್ರೀ ರಂಗ ಪಟ್ಟಣದ ಕೋಟೆಯನ್ನು ಮೊದಲು ವಿಜಯ ನಗರದ ಅರಸರ ಪ್ರತಿನಿಧಿ ನಾಗಮಂಗಲದ ತಿಮ್ಮಣ್ಣ ದಂಡನಾಯಕ ಕಟ್ಟಿಸಿದ ಎಂಬ ಮಾಹಿತಿ ನಿಮಗೆಲ್ಲಾ ತಿಳಿದೇ ಇದೆ .ಅದರ ಒಂದು ಭಾಗವಾಗಿ ಇದನ್ನು ಉಲ್ಲೇಖಿಸಿರಬಹುದು.ಮುಂದೆ ಸಾಗಲು ಹಾದಿಇಲ್ಲದ ಕಾರಣ ವಾಪಸ್ಸು ಬರಬೇಕು ಎನ್ನಿಸುತ್ತದೆ ,ಆದರೆ ಹಿಂದೆ ಇಲ್ಲಿ ಡೆಲ್ಲಿ ಬ್ರಿಡ್ಜ್ ಗೆ ಹೋಗಲು ಕಿರು ಸೇತುವೆಗಳನ್ನು ಕಂದಕದಲ್ಲಿ ನಿರ್ಮಿಸಿದ್ದಿರಬಹುದು.ಈಗ ಹಾಗೆ ಹೋಗಲು ಅವಕಾಶವಿಲ್ಲದ ಕಾರಣ ಮತ್ತೆ ಹಿಂತಿರುಗಿ ಕೋಟೆಯ ಮೇಲೆ ಹತ್ತಿ ನೋಡಿದರೆ ಡೆಲ್ಲಿ ಬ್ರಿಡ್ಜ್ ಇದ್ದ ಜಾಗದ ದರ್ಶನವಾಗುತ್ತದೆ.ಶ್ರೀ ರಂಗ ಪಟ್ಟಣದಿಂದ ಡೆಲ್ಲಿಗೆ ಹೇಗೆ ಹೋಗುತ್ತಿದ್ದರೋ ತಿಳಿಯದು ಆದರೆ ಈ ದಾರಿಯಿಂದ ಬ್ರಿಡ್ಜ್ ದಾಟಿದರೆ ಹಿರೋಡೆ [ಪಾಂಡವಪುರ ], ಮೇಲುಕೋಟೆ ,ನಾಗಮಂಗಲ,ಮಾಯಸಂದ್ರ ,ನಿಟ್ಟೂರು,ಶಿರಾ,ಪಾವಗಡ,ಗುತ್ತಿ,[ಅಂದ್ರ]ತಲುಪಬಹುದು ಆಗಿನ ಕಾಲದಲ್ಲಿ ಇವೆಲ್ಲಾ ಶ್ರೀ ರಂಗ ಪಟ್ಟಣದ ಟಿಪ್ಪೂ ಆಡಳಿತಕ್ಕೆ ಒಳಪಟ್ಟ ಪ್ರದೇಶವಾಗಿದ್ದವು,ಬಹುಷಃ ಈ ಕಮಾನು ಗೇಟು ಉತ್ತರ ದಿಕ್ಕಿಗೆ ಮುಖ ಮಾಡಿದ ಕಾರಣ ಈ ಹೆಸರು ಬಂತೆಂದು ಕಾಣುತ್ತದೆ. ನಂತರ ಈ ಬ್ರಿಡ್ಜ್ ಅನ್ನು ಶ್ರೀ ರಂಗ ಪಟ್ಟಣಕ್ಕೆ ಒದಗುವ ವೈರಿಗಳ ದಾಳಿಯನ್ನು ತಡೆಗಟ್ಟಲು ಟಿಪ್ಪೂ ಕಾಲದಲ್ಲಿ ಈ ಬ್ರಿಡ್ಜ್ ಕೆಡವಿಸಿಹಾಕಲಾಯಿತೆಂದು ತಿಳಿದುಬರುತ್ತದೆ ಈ ಬಗ್ಗೆ ಸ್ಪಷ್ಟ ದಾಖಲೆಗಳಿಲ್ಲ.ಆದರೂ ಈ ಕಮಾನು ಗೇಟಿನ ಮೂಲಕ ಹಲವು ಐತಿಹಾಸಿಕ ಘಟನೆಗಳು ಶ್ರೀ ರಂಗ ಪಟ್ಟಣಕ್ಕೆ ಹರಿದು ಬಂದಿರುವುದಂತೂ ಸತ್ಯ .
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)